BW News Bureau : ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ ಸುರಂಗ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಸುರಂಗ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭಿಸಲು ಅನುಮತಿ ಕೋರಿ ನಿಗಮವು ಸುರಕ್ಷತಾ ಆಯುಕ್ತರಿಗೆ ಮಾರ್ಚ್ 25ರಂದು ಅರ್ಜಿ ಸಲ್ಲಿಸಿತ್ತು. ಪರಿಶೀಲನೆ ನಡೆಸಿದ ನಂತರ ಸುರಕ್ಷತಾ ಆಯುಕ್ತರು ಇಂದು ಸಂಚಾರಕ್ಕೆ ಅನುಮತಿ ನೀಡಿದ್ದಾರೆ.
ಮೆಟ್ರೊ ಮಾರ್ಗಗಳಲ್ಲಿ ವಾಣಿಜ್ಯ ಸಂಚಾರ ಪ್ರಾರಂಭಿಸಲು ರೈಲ್ವೆ ಇಲಾಖೆಗೆ ಸೇರಿದ 2 ಸಂಸ್ಥೆಗಳಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ. ಆ ಎರಡು ಸಂಸ್ಥೆಗಳೆಂದರೆ ‘ರಿಸರ್ಚ್ ಡಿಸೈನ್ಸ್ ಅಂಡ್ ಸ್ಟಾಂಡರ್ಡ್ಸ್ ಆರ್ಗನೈಸೇಷನ್’ (ಆರ್‌ಡಿಎಸ್‌ಒ) ಮತ್ತು ಮೆಟ್ರೊ ರೈಲು ಸುರಕ್ಷತಾ ಆಯುಕ್ತರ (ಎಂಸಿಆರ್‌ಎಸ್) ಕಚೇರಿ.
ಆರ್.ಡಿ.ಎಸ್.ಒ ತಂತ್ರಜ್ಞರು ಪರಿಶೀಲಿಸಿ ಈಗಾಗಲೇ ಪ್ರಮಾಣಪತ್ರ ನೀಡಿದ್ದಾರೆ. ಬೇರೆ ಬೇರೆ ವೇಗದಲ್ಲಿ ರೈಲು ಹೇಗೆ ಓಡಲಿದೆ, ಹಳಿಗಳ ಮೇಲೆ ಉಂಟಾಗುವ ಒತ್ತಡದ ಪರಿಣಾಮಗಳು– ಇವೇ ಮೊದಲಾದ ಅಂಶಗಳ ಬಗ್ಗೆ ಆರ್.ಡಿ.ಎಸ್.ಒದ ತಂತ್ರಜ್ಞರು ಪರಿಶೀಲಿಸಿದ್ದರು. ಸುರಕ್ಷತಾ ಆಯುಕ್ತರು ಸುರಕ್ಷತೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಪರಿಶೀಲಿಸಿ ಅನುಮತಿ ನೀಡಿದೆ.