ನವದೆಹಲಿ : ದೇಶಾದ್ಯಂತ 70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂಭ್ರಮ. ಈ ಸಂದರ್ಭದಲ್ಲಿ ಕೆಂಪುಕೋಟೆ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧ್ವಜಾರೋಹಣ ನೆರವೇರಿಸಿದ್ದಾರೆ.
70ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ 3ನೇ ಬಾರಿಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ ಅವರು, ದೇಶದ ಜನತೆಗೆ ಸ್ವತಂತ್ರ ದಿನೋತ್ಸವದ ಶುಭಾಶಯ ಕೋರಿದರು.
ಭಾರತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಪುರಾತನ ದೇಶವಾಗಿದೆ. ನಮ್ಮ ದೇಶ ಧೀರ್ಘಕಾಲಿಕ ಇತಿಹಾಸವನ್ನು ಹೊಂದಿದೆ. ದೇಶಕ್ಕಾಗಿ ಸಾಕಷ್ಟು ಮಂದಿ ತ್ಯಾಗ ಮಾಡಿದ್ದಾರೆ. ಇಂದು ನಾವು ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಪಂಡಿತ್ ನೆಹರು ನೆನೆಯುತ್ತಿದ್ದೇವೆ ಎಂದು ಹೇಳಿದರು.
ಸ್ವಾತಂತ್ರ್ಯ ದಿನದ ಈ ಸಂದರ್ಭದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದರು. ನಾವು ನಮ್ಮ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ. ಇಂದು ನಾವು ಹಳ್ಳಿಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಒಂದು ದಿನಗಲ್ಲಿ 100 ಕಿ.ಮೀ ನಷ್ಟು ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ದಿನದಲ್ಲಿ 70-75 ಕಿ.ಮೀ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. 60 ವರ್ಷಗಳಲ್ಲಿ 14 ಜನರು ಗ್ಯಾಸ್ ಸಂಪರ್ಕಗಳನ್ನು ಪಡೆದುಕೊಂಡಿದ್ದಾರೆ. ಆದರೆ, ನಮ್ಮ ಸರ್ಕಾರ 60 ವಾರಗಳಲ್ಲಿ 4 ಕೋಟಿ ಜನರಿಗೆ ಗ್ಯಾಸ್ ಸಂಪರ್ಕವನ್ನು ನೀಡಿದೆ ಎಂದರು.
ಎನ್ ಡಿಎ ಸರ್ಕಾರ ರೈತರಿಗೆ ಮಾಡಿದ ಸಹಾಯದ ಕುರಿತಂತೆ ಮಾತನಾಡಿದ ಅವರು, ನಮ್ಮ ಸರ್ಕಾರ ರೈತರಿಗೆ ಸಹಾಯಕವಾಗುವ ಸಲುವಾಗಿ ಸಾಕಷ್ಟು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ದೇಶದ ರೈತರಿಗೆ ಸರಿಯಾದ ರೀತಿಯಲ್ಲಿ ನೀರು ದೊರಕಿದ್ದೇ ಆದರೆ, ನಮ್ಮ ಭೂಮಿಯನ್ನು ಅವರು ಚಿನ್ನವಾಗಿ ಮಾರ್ಪಾಡು ಮಾಡುತ್ತಾರೆ. 2022ರೊಳಗಾಗಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದು ನನ್ನ ಕನಸಾಗಿದೆ ಎಂದು ಹೇಳಿದರು.
ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ದೇಶದ ಆರ್ಥಿಕತೆಗೆ ಬಲವನ್ನು ನೀಡಿದೆ. ಜಿಎಸ್ ಟಿ ಮಸೂದೆಗೆ ಬೆಂಬಲ ಸೂಚಿಸಿದ ಎಲ್ಲಾ ಪಕ್ಷಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದ ಪ್ರಧಾನಿ, ಬದಲಾವಣೆಯೇ ನಮ್ಮ ಪ್ರಮುಖ ಉದ್ದೇಶವಾಗಿದ್ದು, ಪ್ರತೀಯೊಂದು ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮ ಪಡುತ್ತಿದ್ದೇವೆ. ನಮ್ಮ ಸರ್ಕಾರ ನೀತಿ ಹಾಗೂ ಧೋರಣೆಗಳು ಮುಕ್ತವಾಗಿವೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು:
* ಸಮಾಜದಲ್ಲಿ ಮಹಿಳಾ ಸಬಲೀಕರಣಕ್ಕೆ ಯೋಜನೆಗಳನ್ನು ರೂಪಿಸುವುದು ಸರ್ಕಾರದ ಗುರಿ.
* ಒಂದು ದೇಶ, ಒಂದು ಬೆಲೆ ಎಂಬ ಸೂತ್ರಕ್ಕೆ ಸಾಕಾರ ಬದ್ಧವಾಗಿದೆ.
* ಯುವಶಕ್ತಿಯನ್ನು ಒಗ್ಗೂಡಿಸಿ ಅವರಿಗೆ ಉದ್ಯೋಗವಕಾಶ ಕಲ್ಪಿಸಿ ದೇಶದ ಅಭಿವೃದ್ಧಿಗೆ ಶ್ರಮಿಸುವುದು.
* ಪ್ರಸೂತಿ ರಜೆ 12 ವಾರದಿಂದ 26 ವಾರಗಳಿಗೆ ಹೆಚ್ಚಿಸಿರುವುದು ಮಹಿಳಾ ಕಲ್ಯಾಣಕ್ಕಾಗಿ.
* ಭಾರತದ ಆರ್ಥಿಕ ಅಭಿವೃದ್ಧಿಯನ್ನು ಜಗತ್ತೆ ಗುರುತಿಸಿದೆ. ವಿಶ್ವದ ಉದ್ಯಮ ಕ್ಷೇತ್ರದ ಪಟ್ಟಿಯಲ್ಲಿ ಭಾರತದ ಹೆಸರು ಮೇಲ್ದರ್ಜೆಗೇರಿದೆ.
* ಆರ್ಥಿಕ ಹೊರೆ ಅನುಭವಿಸುತ್ತಿದ್ದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ, ಬಿಎಸ್ಎನ್ಎಲ್, ಶಿಪ್ಪಿಂಗ್ ಕಾಪೋರೇಶನ್ಗಳನ್ನು ಸುಸ್ಥಿತಿಗೆ ಕೊಂಡೊಯ್ದಿದ್ದೇವೆ.
* ಸಾಮಾನ್ಯ ನಾಗರಿಕನಿಗೆ ಸರ್ಕಾರಿ ಯೋಜನೆ ತಲುಪಿಸುವುದೇ ನಮ್ಮ ಧ್ಯೇಯ.
* ಪ್ರಜಾಪ್ರಭುತ್ವದಲ್ಲಿ ತಲೆ ಎತ್ತಿ ನಡೆಯುತ್ತಿರುವ ನಾವು ಹಿಂದಿನ ಸರ್ಕಾರದ ಯೋಜನೆಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದೇವೆ
* ಬಡತನ ನಿರ್ಮೂಲನೆಗಿಂತ ದೊಡ್ಡದಾದ ಸ್ವಾತಂತ್ರ್ಯ ಮತ್ತೊಂದಿಲ್ಲ. ಜಗತ್ತಿನಿಂದ ಬಡತನ ಹೊಡೆದೋಡಿಸಲು ಸಾರ್ಕ್ ರಾಷ್ಟ್ರಗಳಿಗೆ ಕರೆ.
* ಪಿಓಕೆ, ಬಲೂಚಿಸ್ತಾನ, ಗಿಲ್ಗಿಟ್ ಪ್ರದೇಶದ ಜನ ಧನ್ಯವಾದ ಹೇಳಿದ್ದಕ್ಕೆ ನಾನು ಚಿರಋಣಿ. ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ.
* ವಿವಿಧತೆಯಲ್ಲಿ ಏಕತೆ ಭಾರತದ ಸಂಸ್ಕೃತಿ. ಹಿಂಸೆ ಮತ್ತು ದುಷ್ಕೃತ್ಯಕ್ಕೆ ದೇಶದಲ್ಲಿ ಯಾವುದೇ ಅವಕಾಶವಿಲ್ಲ.
* ದೇಶಕ್ಕಾಗಿ ಗಡಿಯಲ್ಲಿ 35 ಸಾವವಿರ ಯೋಧರು ತಮ್ಮ ಪ್ರಾಣ ತೆತ್ತಿದ್ದಾರೆ ಅವರ ಬಲಿದಾನ ಮರೆಯಲು ಅಸಾಧ್ಯ.