BW News Bureau : ವಿಶ್ವ ಯೋಗ ದಿನಾಚರಣೆಯ ಮುನ್ನವೇ, ಉಪ ಯೋಗದ ಉಪಯೋಗವನ್ನು ಪಡೆಯಿರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಬೆಂಗಳೂರಿನ ನಾಗರೀಕರಲ್ಲಿ ಮನವಿ ಮಾಡಿದ್ದಾರೆ.
ಜೂನ್ 21 ರಂದು ನಡೆಯಲಿರುವ ಎರಡನೇ ವಿಶ್ವ ಯೋಗ ದಿನಾಚರಣೆಗೆ ನಗರದ ನಾಗರೀಕರನ್ನು ಸಜ್ಜುಗೊಳಿಸಲು ಪ್ರಯತ್ನಿಸಿರುವ ಆಯುಷ್ ಇಲಾಖೆಯು ಪೂರ್ವಭಾವಿಯಾಗಿ ಜೂನ್ 19 ರ ಭಾನುವಾರದಂದೇ ಬೆಳಿಗ್ಗೆ 7-30 ರಿಂದ ಕಬ್ಬನ್ ಉದ್ಯಾನದ ಸರ್ ಕೆ ಶೇಷಾದ್ರಿ ಸ್ಮಾರಕ ಗ್ರಂಥಾಲಯದ ಮುಂಭಾಗದಿಂದ ಹಡ್ಸನ್ ವೃತ್ತದವರೆಗೆ ಉಪ ಯೋಗ ಕಾರ್ಯಕ್ರಮವನ್ನು ಆಯೋಜಿಸಿದೆ.
ಇಶಾ ಪ್ರತಿಷ್ಠಾನದ ಸಹಯೋಗದೊಂದಿಗೆ ಆಯೋಜಿಸಿರುವ ಈ ವಿಶೇಷ ಕಾರ್ಯಕ್ರಮವು ಕೇವಲ 90-ನಿಮಿಷಗಳ ಅವಧಿಯದ್ದಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಯೋಗಾಭ್ಯಾಸದ ಮೂಲ ಆಸನಗಳನ್ನು ಕಲಿಸಿಕೊಡಲಾಗುತ್ತದೆ.
ಮುಂದಿನ ದಿನಗಳಲ್ಲೂ ಯೋಗವನ್ನು ಮುಂದುವರೆಸ ಬಯಸುವವರಿಗೆ ಕಾರ್ಯಕ್ರಮದ ಆವರಣದಲ್ಲಿ ಯೋಗ ಕುರಿತ ಪುಸ್ತಕಗಳು ಹಾಗೂ ದೃಶ್ಯ ಚಿತ್ರಿಕೆಗಳು ( ಡಿ ವಿ ಡಿ – ಡಿಜಿಟಲ್ ವೀಡಿಯೋ ಡಿಸ್ಕ್ ) ಸುಲಭ ದರದಲ್ಲಿ ಲಭಿಸಲಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಉಪ ಯೋಗದ ಈ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಡಾ ಶಾಲಿನಿ ರಜನೀಶ್ ತಿಳಿಸಿದ್ದಾರೆ.