ಮೊರೆನಾ : ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಮುಸ್ಲಿಂ ಸಮುದಾಯವೇ ಜಾಗವನ್ನು ಕೊಟ್ಟು, ಹಣಕಾಸಿನ ನೆರವು ನೀಡಿದೆ ಎಂದು ಜೀ ನ್ಯೂಸ್ ಮಾಧ್ಯಮ ವರದಿ ತಿಳಿಸಿದೆ. ಇದೊಂದು ಕೋಮು ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದೆ.
ಮೊರೆನಾದ ಖೇಡಾಕಾಲಾ ಗ್ರಾಮದಲ್ಲಿ ಶ್ರೀ ರಾಮ್ ಜಾನಕಿ ದೇವಾಲಯ ನಿರ್ಮಾಣಕ್ಕಾಗಿ ಮುಸ್ಲಿಂ ಸಮುದಾಯ ಹಿಂದೂಗಳಿಗೆ ಜಾಗವನ್ನು ದಾನವಾಗಿ ನೀಡಿದೆ. ಅಷ್ಟೇ ಅಲ್ಲ ದೇವಾಲಯ ನಿರ್ಮಾಣಕ್ಕಾಗಿ ಸುಮಾರು 50 ಸಾವಿರ ರೂಪಾಯಿ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ ಎಂದು ವರದಿ ವಿವರಿಸಿದೆ.
80 ಮುಸ್ಲಿಂ ಕುಟುಂಬಗಳು ವಾಸವಾಗಿರುವ ಖೇಡಾಕಾಲಾ ಗ್ರಾಮದಲ್ಲಿ ಶ್ರೀರಾಮ್ ಜಾನಕಿ ದೇವಾಲಯ ನಿರ್ಮಾಣ ಮಾಡಲು ಯಾವುದೇ ತಕರಾರಿಲ್ಲದೆ ಜಾಗವನ್ನು ನೀಡಿದ್ದಾರೆ. ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಪ್ರತಿ ಹಂತದಲ್ಲೂ ಮುಸ್ಲಿಂ ಸಹೋದರರು ನೆರವು ನೀಡುತ್ತಿದ್ದಾರೆ ಎಂದು ಖೇಡಾಕಾಲಾ ಗ್ರಾಮದ ಮುಖ್ಯಸ್ಥ ಸಂತ ಕುಮಾರ್ ಸಿಂಗ್ ತಿಳಿಸಿದ್ದಾರೆ.