Byatarayanapura : ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯದಲ್ಲಿ ನಡೆದಿದೆ.
21 ವರ್ಷದ ಜಬೀವುದ್ದೀನ್ ಮೃತ ಯುವಕ. ಶನಿವಾರ ರಾತ್ರಿ 8.30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಎದುರಿಗಿದ್ದ ವಾಹನವನ್ನು ಹಿಂದಿಕ್ಕಲು ಹೋಗಿ ಜಬೀವುದ್ದೀನ್ಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಜಬೀವುದ್ದೀನ್ ತಲೆಯ ಮೇಲೆ ಅದೇ ಬಸ್ನ ಚಕ್ರಗಳು ಹರಿದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಬಸ್ನನ್ನು ಜಖಂಗೊಳಿಸಿದ್ದಾರೆ. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಬಾಣಸವಾಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.