ಹಾವೇರಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಮೈದೂರಿನ ಮೃತ ರೈತ ಅಶೋಕ್ ಮಡಿವಾಳ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಜೊತೆಗೆ ಕೆಪಿಸಿಸಿ ವತಿಯಿಂದ 1 ಲಕ್ಷ ರೂಪಾಯಿ ಪರಿಹಾರ ಚೆಕ್ ಅನ್ನು ರಾಹುಲ್ ಗಾಂಧಿ ವಿತರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃತ ರೈತನ ಪುತ್ರನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು.
ಶುಕ್ರವಾರ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಮೃತ ರೈತ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ನಂತರ ವಿದ್ಯಾರ್ಥಿಗಳು, ರೈತರ ಜೊತೆ ಸಂವಾದ ನಡೆಸಿದ್ದರು. ನಂತರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು.
ಶನಿವಾರ ಬೆಳಗ್ಗೆ ಹಾವೇರಿಗೆ ಭೇಟಿ ನೀಡಿದ ರಾಹುಲ್ ಗಾಂಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ. ಜಿ ಪರಮೇಶ್ವರ್, ಬಿ ಕೆ ಹರಿಪ್ರಸಾದ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದಾರೆ.
ಮೃತ ರೈತನ ಮನೆಗೆ ಭೇಟಿ ಕೊಟ್ಟ ನಂತರ ಮೈದೂರಿನ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಮಕ್ಕಳ ಜೊತೆ ಸಂವಾದ ನಡೆಸಿದರು.
ಕಳಸಾ ಬಂಡೂರಿ ಹೋರಾಟಗಾರರು ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ, ಯೋಜನೆ ಶೀಘ್ರ ಜಾರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹೇರಿ, ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮನವೊಲಿಸಲು ಮನವಿ ಮಾಡಿಕೊಂಡರು.