ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡಲಾಗುತ್ತಿದ್ದು, ಈ ಬಗ್ಗೆ ರಾಜ್ಯದ ಜನತೆ ಆತಂಕಪಡಬೇಕಾಗಿಲ್ಲ. ರೈತರ ಬೆಳೆಗಳಿಗೆ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಬೆಂಗಳೂರು-ಮಂಡ್ಯ-ಮೈಸೂರು ಹಾಗೂ ಈ ನಡುವೆ ಇರುವ ಹಳ್ಳಿಗಳಲ್ಲಿ ವಾಸಿಸುವ ಜನತೆಗೆ ಕುಡಿಯುವ ನೀರು ಕೊಡುತ್ತೇವೆ. ಅಲ್ಲದೆ, ನೀರಾವರಿ ಸಮನ್ವಯ ಸಮಿತಿಯಲ್ಲಿ ಈಗಾಗಲೇ ತೀರ್ಮಾನವಾಗಿರುವಂತೆ ಬೆಳೆಗಳಿಗೂ ನೀರು ಕೊಡಲು ಪ್ರಾಮಾಣಿಕ ಹಾಗೂ ಗಂಭೀರ ಪ್ರಯತ್ನ ಮಾಡುತ್ತೇವೆ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಯಾರೂ ಆತಂಕಕ್ಕೆ ಒಳಗಾಗಬಾರದು. ಅಂತೆಯೇ, ಭಾವೋದ್ವೇಗಕ್ಕೆ ಒಳಗಾಗಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಬಾರದು. ಎಲ್ಲರೂ ಸಂಯಮ ಹಾಗೂ ಶಾಂತಿ ಕಾಯ್ದು ಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮುಖ್ಯಮಂತ್ರಿ ಮನವಿ ಮಾಡಿದರು.
ಈ ಹಿಂದೆ 1995, 2002 ಹಾಗೂ 2012 ರಲ್ಲಿ ಇಂತಹುದೇ ಪರಿಸ್ಥಿತಿ ಎದುರಾದಾಗಲೂ, ನ್ಯಾಯಾಲಯವು ಸಂಕಷ್ಟ ಸೂತ್ರ ಪಾಲಿಸಲು ಸೂಚನೆ ನೀಡಿತ್ತು. ಅಲ್ಲದೆ, ಸರ್ವೋಚ್ಛ ನ್ಯಾಯಾಲಯವು 2012 ರ ಸೆಪ್ಟೆಂಬರ್ 12 ರಿಂದ 20 ರವರೆಗೆ ತಲಾ 10,000 ಕ್ಯೂಸೆಕ್ಸ್ ನೀರು ಬಿಡುವಂತೆ ಸೂಚಿಸಿದ್ದಾಗ, ಅಂದಿನ ಸರ್ಕಾರವು ಸೌಜನ್ಯಕ್ಕೂ ಕೂಡಾ ಪ್ರತಿಪಕ್ಷಗಳನ್ನು ಸಂಪರ್ಕಿಸದೆಯೇ ತಮಿಳು ನಾಡಿಗೆ ನೀರು ಹರಿಸಿತ್ತು. ಇದೀಗ ತಮ್ಮ ಸರ್ಕಾರ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೂ ಮುನ್ನ ಹಾಗೂ ತೀರ್ಪಿನ ನಂತರವೂ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿರುವಾಗ ಯಾರೂ ಟೀಕೆಗಳನ್ನು ಮಾಡುವುದು ಸಮಂಜಸವಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕರ್ನಾಟಕದ ಪರವಾಗಿ ವಾದ ಮಂಡಿಸಿದ್ದ ಫಾಲಿ ನಾರೀಮನ್ ಅವರನ್ನು ಸಮರ್ಥಿಸಿಕೊಂಡಿರುವ ಸಿಎಂ, ವಾದ ಮಂಡನೆ ವೇಳೆ ನಾರೀಮನ್ ಅವರು ತಮಿಳುನಾಡಿಗೆ ನೀರು ಬಿಡುವುದೇ ಇಲ್ಲ ಎಂದು ಹೇಳಿರಲಿಲ್ಲ. 10 ಸಾವಿರ ಕ್ಯೂಸೆಕ್ಸ್ ನೀರನ್ನು 6 ದಿನಗಳ ಬಿಡುಗಡೆ ಮಾಡಲು ಕರ್ನಾಟಕ ಸಿದ್ಧವಿದೆ ಎಂದು ಹೇಳಿದ್ದರು. ಆದರೆ, ಸುಪ್ರೀಂ ಕೋರ್ಟ್ 10 ದಿನಗಳ ಕಾಲ 15 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ ಎಂದರು.
ಸುಪ್ರೀಂ ಆದೇಶವನ್ನು ಪಾಲಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿರಲಿಲ್ಲ. ವಿವಾದ ಕುರಿತಂತೆ ಕಾವೇರಿ ಮೇಲ್ವಿಚಾರಣಾ ಸಮಿತಿಯನ್ನು ಶೀಘ್ರದಲ್ಲೇ ಸಂಪರ್ಕಿಸಲಾಗುತ್ತದೆ. ಆದೇಶ ಮರುಪರಿಶೀಲಿಸುವಂತೆ ಕೋರಿ ನ್ಯಾಯಾಲಯದಲ್ಲಿ ಮತ್ತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.