ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಜುಲೈ 1 ರಂದು ಚಾಲನೆ ನೀಡಲಿದ್ದಾರೆ. ನವದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ, ಸಂಜೆ 4 ಗಂಟೆಗೆ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ನೂರಾರು ಕೋಟಿ ರೂ. ವಿದೇಶಿ ಬಂಡವಾಳ ಹರಿದು ಬರುವ ನಿರೀಕ್ಷೆಯಿದೆ.
ಇದೇ ಸಂದರ್ಭದಲ್ಲಿ ಡಿಜಿಟಲ್ ಲಾಕರ್, ಇ- ಎಜುಕೇಷನ್, ಇ- ಹೆಲ್ತ್, ಇ- ಸೈನ್ ಮತ್ತು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಸೇರಿದಂತೆ ಸುಮಾರು 1 ಲಕ್ಷ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಈ ಸಪ್ತಾಹದ ಮೂಲಕ 2.5 ಲಕ್ಷ ಹಳ್ಳಿಗಳಲ್ಲಿ ಬ್ರೋಡ್ ಬ್ಯಾಂಡ್ ಸೇವೆ ಕಲ್ಪಿಸುವ ಗುರಿ ಹೊಂದಲಾಗಿದೆ. ದೇಶದ ಜನತೆ ನೂತನ ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಳ್ಳಬೇಕೆಂಬುದೇ ಯೋಜನೆಯ ಮೂಲ ಉದ್ದೇಶ. 2019ರ ವೇಳೆಗೆ ಇಡೀ ದೇಶದಲ್ಲಿ ಬ್ರೋಡ್ ಬ್ಯಾಂಡ್ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯ ಭಾಗವಾಗಿ ಆಪ್ಟಿಕ್ ಫೈಬರ್ ಹಾಕುವ ಕೆಲಸ ಈಗಾಗಲೇ ಪ್ರಾರಂಭಾವಾಗಿದ್ದು, 2,50,000 ಗ್ರಾಮ ಪಂಚಾಯತ್ ಗಳಿಗೆ ಆಪ್ಟಿಕ್ ಫೈಬರ್ ಮೂಲಕ ಸಂಪರ್ಕ ಕಲ್ಪಿಸಲಾಗುವುದು.
ಸ್ಕೂಲ್ ಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಈ ಯೋಜನೆಯ ಮೂಲಕ ವೈಫೈ ವ್ಯವಸ್ಥೆ ಕಲ್ಪಿಸಲಾಗುವುದು. ಸರ್ಕಾರಿ ಸೇವೆಗಳನ್ನು ಜನರಿಗೆ ನೇರವಾಗಿ ತಲುಪಿಸುವುದು ಈ ಯೋಜನೆಯ ಉದ್ದೇಶ.
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂಜಿ, ಟಾಟಾ ಗೂಪ್ ನ ಸಿಇಓ ಸೈರಸ್ ಮಿಸ್ತ್ರಿ ಸೇರಿದಂತೆ ಉದ್ಘಾಟನಾ ಸಮಾರಂಭಕ್ಕೆ ಸುಮಾರ 1,000 ಅತಿಥಿಗಳು ಆಗಮಿಸುವ ನಿರೀಕ್ಷೆ ಇದೆ.