ನವದೆಹಲಿ : ವಿದೇಶೀ ಹೂಡಿಕೆಗಳನ್ನು ಆಕರ್ಷಿಸುವ ಸಲುವಾಗಿ ನಾವು ನಮ್ಮ ಆರ್ಥಿಕತೆಯನ್ನು ತೆರೆದಿದ್ದೇವೆ. ಭ್ರಷ್ಟಾಚಾರವನ್ನು ನಿಗ್ರಹಿಸುವ ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೆಂದ್ರ ಎನ್.ಡಿ.ಎ ಸರ್ಕಾರ ಎರಡು ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ದೇಶದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಸುಧಾರಣೆಗಳನ್ನು ತರಲು ಸರ್ಕಾರ ವಿಫಲವಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಅರ್ಥಿಕವಾಗಿ ನಾವು ಬಹಳಷ್ಟನ್ನು ಸಾಧಿಸಿದ್ದೇವೆ, ಆದರೆ ಸಾಧಿಸಬೇಕಾದ ಕೆಲಸ ಇನ್ನೂ ಬಹಳಷ್ಟಿದೆ ಎಂದು ಹೇಳಿದ್ದಾರೆ.
ದೇಶದ ಆರ್ಥಿಕತೆಯನ್ನು ಚುರುಕುಗೊಳಿಸುವ ಕೆಲಸ ಮಾಡಿದ್ದೇವೆ. ಈಗಿನ್ನು ರಾಜ್ಯ ಸರ್ಕಾರಗಳು ಈ ಉಪಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ವಿದೇಶೀ ಬಂಡವಾಳ ಹೂಡಿಕೆಗೆ ಮೊದಲು ಆದ್ಯತೆ ನೀಡುವ ಮೂಲಕ ರಾಷ್ಟ್ರೀಯ ವಹಿವಾಟು ಉನ್ನತೀಕರಣಕ್ಕೆ ವೇದಿಕೆ ಕಲ್ಪಿಸಿಕೊಡಲಾಗುವುದು. ಈ ಕುರಿತು ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರವೊಂದನ್ನು ಸಿದ್ಧಪಡಿಸಿದೆ. ಇದರಿಂದ ದೇಶ ವಿಶ್ವಮಟ್ಟದಲ್ಲಿ ಅಭಿವೃದ್ದಿ ಸಾಧಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.