ಕಾಬೂಲ್ : ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನ ಅತಿಥಿಗೃಹವೊಂದರಲ್ಲಿ ವಿದೇಶಿಯರ ಔತಣಕೂಟದ ವೇಳೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಭಾರತೀಯರು ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ.
ಇಲ್ಲಿನ ಪಾರ್ಕ್ ಪ್ಯಾಲೇಸ್ ಗೆಸ್ಟ್ ಹೌಸ್ ಮೇಲೆ ಗನ್ ಧಾರಿ ವ್ಯಕ್ತಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾವ ಉಗ್ರ ಸಂಘಟನೆಯೂ ಹೊಣೆ ಹೊತ್ತುಕೊಂಡಿಲ್ಲ. ಪೊಲೀಸ್ ಪಡೆ ಕೂಡಲೇ ಪಾರ್ಕ್ ಪ್ಯಾಲೇಸ್ ಗೆಸ್ಟ್ ಹೌಸ್ ಸುತ್ತುವರಿದಿದ್ದರು. ಈ ಸಂದರ್ಭದಲ್ಲಿ ದಾಳಿಕೋರರು ಮತ್ತು ಭದ್ರತಾ ಪಡೆ ನಡುವೆ ಸುಮಾರು ಐದು ತಾಸು ಗುಂಡಿನ ಚಕಮಕಿ ನಡೆದಿತ್ತು.
ಪೊಲೀಸ್ ಪಡೆ ನಡೆಸಿದ ಪ್ರತಿದಾಳಿಯಲ್ಲಿ ಓರ್ವ ದಾಳಿಕೋರ ಸಾವನ್ನಪ್ಪಿದ್ದು, ಉಳಿದ ವಿವರ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವು ಅತಿಥಿಗೃಹದಲ್ಲಿದ್ದ ಸುಮಾರು 2೦ ಜನರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ