ನವದೆಹಲಿ : ಭಾರತದ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ತಾನ ಸೇನೆ ವಿರುದ್ಧ ತಿರುಗಿ ಬಿದ್ದ ಭಾರತೀಯ ಸೇನೆ, ಸರ್ಜಿಕಲ್ ದಾಳಿ ನಡೆಸಿ ಹಲವು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜನರಲ್ ರಣಬೀರ್ ಸಿಂಗ್, ಸೇನೆಗೆ ದೊರೆತ ಖಚಿತ ಮಾಹಿತಿಗಳ ಆಧಾರದ ಮೇಲೆ ಕಳೆದ ರಾತ್ರಿ ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಹಲವು ಉಗ್ರರನ್ನು ಕೊಲ್ಲಲಾಗಿದ್ದು, ಅವರೊಂದಿಗಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತೀಯ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಅಕ್ರಮಿತ ಕಾಶ್ಮೀರದ ಸುಮಾರು 3 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದೆ. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಡಿ ನಿಯಂತ್ರಣ ರೇಖೆ ಬಳಿಯ ಕೇಲ್ ಮತ್ತು ಭೀಮ್ ಬರ್ ಪ್ರದೇಶದಲ್ಲಿ ಸೀಮಿತ ದಾಳಿ ನಡೆಸಿದೆ. ಈ ವೇಳೆ ಸುಮಾರು 6 ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ಮಾಡಲಾಗಿದ್ದು, ಕ್ಯಾಂಪ್ ಸಂಪೂರ್ಣ ಧ್ವಂಸಗೊಂಡಿದೆ. ಈ ವೇಳೆ ಹಲವು ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೂಲಕ ರಣಬೀರ್ ಸಿಂಗ್, ಯಾವುದೇ ರೀತಿಯ ಭಾರತ ವಿರೋಧಿ ಕಾರ್ಯಾಚರಣೆಗಳನ್ನು ಸೇನೆ ಸಹಿಸುವುದಿಲ್ಲ. ಅಕ್ರಮ ನುಸುಳುವಿಕೆಯಂತಹ ಘಟನೆಗಳು ನಡೆದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.