ಕಾಬೂಲ್ : ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಕಾಬೂಲ್ ನ ವಿಮಾನ ನಿಲ್ದಾಣದ ಬಳಿ ಭಯೋತ್ಪಾದಕರು ಆತ್ಮಾಹುತಿ ಕಾರ್ ಬಾಂಬ್ ಸ್ಫೋಟ ನಡೆಸಿದ್ದಾರೆ.
ಈ ಭೀಕರ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಓರ್ವ ವಿದೇಶಿ ಪ್ರಜೆ ಹಾಗೂ ಇಬ್ಬರು ಅಫ್ಘನ್ ಪ್ರಜೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ
ಬೆಳಗ್ಗೆ ಜನದಟ್ಟಣೆಯಿರುವ ಸಂದರ್ಭದಲ್ಲಿ ಉಗ್ರರು ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಈ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಿಸಿದ್ದಾರೆ. ಸ್ಥಳದಲ್ಲಿ ಸ್ಫೋಟದಿಂದ ದಟ್ಟ ಹೊಗೆ ಆವರಿಸಿದ್ದು, ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಬಲ ಸ್ಫೋಟ ನಡೆದ ಸ್ಥಳದಲ್ಲಿದ್ದ ಮೂರು ನಾಗರಿಕ ವಾಹನಗಳು, ಒಂದು ವಿದೇಶಿ ಪಡೆಗಳಿದ್ದ ವಾಹನ ಜಖಂ ಆಗಿವೆ. ಸಾವಿನ ಸಂಖ್ಯೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಗೃಹಖಾತೆ ವಕ್ತಾರ ನಾಜೀಬ್ ಡ್ಯಾನಿಷ್ ತಿಳಿಸಿದ್ದಾರೆ.
ಸ್ಥಳಕ್ಕೆ ಸೇನಾಪಡೆಗಳು ದಾವಿಸಿದ್ದು, ವಿಮಾನ ನಿಲ್ದಾಣವನ್ನು ಸುತ್ತುವರಿದಿವೆ. ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಭದ್ರತೆಯನ್ನು ಬಲಪಡಿಸಲಾಗಿದೆ. ನ್ಯಾಟೋ ಪಡೆಗಳಿಂದ ಈ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆದಿದೆ.
ವಿದೇಶಿಯರನ್ನು ಟಾರ್ಗೆಟ್ ಮಾಡಿರುವ ಉಗ್ರರು ನಾಲ್ಕುದಿನಗಳ ಹಿಂದಷ್ಟೆ ಕಾಬೂಲ್ ನ ಹೋಟೆಲ್ ಒಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನಾಲ್ವರು ಭಾರತೀಯರು ಸೇರಿ 14 ಜನ ಸಾವನ್ನಪ್ಪಿದ್ದರು.