ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬಿಗ್ ರಿಲೀಫ್ ದೊರೆತಿದ್ದು, ಹಿಟ್ ಅಂಡ್ ರನ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್, ಸಲ್ಮಾನ್ ಗೆ ಷರತ್ತುಬದ್ಧ ಜಾಮೀನು ನೀಡಿದೆ.
ಮೇ 6 ರ ಬುಧವಾರ ಮುಂಬೈ ಸೆಷೆನ್ಸ್ ಕೋರ್ಟ್ ಸಲ್ಮಾನ್ ಖಾನ್ ಗೆ 5 ವರ್ಷದ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಅಭಯ್ ತಿಪ್ಸೆ ಸೆಷನ್ಸ್ ಕೋರ್ಟ್ ನೀಡಿದ್ದ ತೀರ್ಪನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿದೆ.
ಸೆಷನ್ಸ್ ಕೋರ್ಟ್ ನೀಡಿರುವ ತೀರ್ಪು ಸರಿ ಇದೆಯೋ ಇಲ್ಲವೋ ಎಂಬ ಬಗ್ಗೆ ಹೈಕೋರ್ಟ್ ನಲ್ಲಿ ಮೇಲ್ಮನವಿ ವಿಚಾರಣೆ ನಡೆಯುತ್ತಿದೆ. ಮೇಲ್ಮನವಿ ವಿಚಾರಣೆ ನಡೆಯುವವರೆಗೂ ಸಲ್ಮಾನ್ ಖಾನ್ ಏಕೆ ಜೈಲಿನಲ್ಲಿರಬೇಕು ಎಂದು ಹೈಕೋರ್ಟ್ ನ ಅಭಯ್ ತಿಪ್ಸೆ ಪೀಠ ಸರ್ಕಾರಿ ವಕೀಲರನ್ನು ಪ್ರಶ್ನಿಸಿದೆ. ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ನಿಮ್ಮ ವಿರೋಧವೇಕೆ? ಎಂದು ಸಂದೀಪ್ ಶಿಂಧೆ ಅವರನ್ನು ನ್ಯಾ.ಅಭಯ್ ತಿಪ್ಸೆ ಪ್ರಶ್ನಿಸಿದ್ದಾರೆ.
ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಷರತ್ತುಗಳನ್ನು ಪೂರೈಸಬೇಕಿರುವ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಮಧ್ಯಾಹ್ನದ ವೇಳೆಗೆ ಮುಂಬೈ ಹೈಕೋರ್ಟ್ ಗೆ ಶರಣಾಗಿ ಷರತ್ತುಗಳನ್ನು ಪೂರೈಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.