ಮುಂಬೈ : 2002ರ ಹಿಟ್ ಆಂಟ್ ರನ್ ಪ್ರಕರಣ ಸಂಬಂಧ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬಾಂಬೆ ಹೈಕೋರ್ಟ್ ಎರಡು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಹಾಗೂ ಜಾಮೀನು ಕೋರಿ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಅನಾರೋಗ್ಯದ ಕಾರಣಗಳಿಂದಾಗಿ ಎರಡು ದಿನದ ಮಧ್ಯಂತರ ಜಾಮೀನು ನೀಡಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ವಕೀಲ ಹರೀಶ್ ಸಾಳ್ವೆ ಅವರು ಸಲ್ಮಾನ್ ಪರ ವಾದ ಮಂಡಿಸಿದ್ದರು. ಸುದೀರ್ಘ 12 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್, ಬೆಳಿಗ್ಗೆ ತೀರ್ಪು ಪ್ರಕಟಿಸಿತ್ತು. ಬೆಳಗ್ಗೆ 11.15ಕ್ಕೆ ತೀರ್ಪು ಪ್ರಕಟಿಸಿದ ಜಡ್ಜ್ ಡಿ.ವಿ.ದೇಶಾಪಂಡೆ ಅವರು, ಸಲ್ಮಾನ್ ವಿರುದ್ಧದ ಉದ್ದೇಶರಹಿತ ಮಾನವ ಹತ್ಯೆ ಆರೋಪ, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದ ಆರೋಪ, ಕುಡಿದು ವಾಹನ ಚಾಲನೆ, ಅತಿ ವೇಗ, ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪಗಳು ಸಾಬೀತಾಗಿದ್ದು, ಬಾಲಿವುಡ್ ನಟ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರು.
ವಾದ-ವಿವಾದದ ಬಳಿಕ ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಮೂರ್ತಿ ದೇಶಪಾಂಡೆ ಅವರು, ಸಲ್ಮಾನ್ ಖಾನ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ ದಂಡ ವಿಧಿಸಿದ್ದರು. ತೀರ್ಪು ಪ್ರಕಟವಾಗುತ್ತಿದ್ದಂತೆ ಪೊಲೀಸರು ಸಲ್ಮಾನ್ ಖಾನ್ ಅವರನ್ನು ವಶಕ್ಕೆ ಪಡೆದಿದ್ದರು.