ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸೂಟು ಬೂಟಿನ ಸರ್ಕಾರ ಎಂದು ಲೇವಡಿ ಮಾಡಿದ್ದ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟಾಂಗ್ ನೀಡಿದ್ದು ನಮ್ಮದು ಸೂಟು ಬೂಟಿನ ಸರ್ಕಾರವಿರಬಹುದು ಆದರೆ ಸೂಟ್ ಕೇಸ್ ಸರ್ಕಾರವಲ್ಲ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರದ್ದು ಸೂಟು ಬೂಟಿನ ಸರ್ಕಾರ ಎಂದು ಲೇವಡಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿಶಂಕರ್ ಪ್ರಸಾದ್, ನಮ್ಮದು ಸೂಟ್ ಕೇಸ್ ಸರ್ಕಾರವಲ್ಲ ಎಂದು ಹೇಳುವ ಮೂಲಕ ಕಳೆದ 10 ವರ್ಷಗಳಲ್ಲಿ ಯುಪಿಎ ಸರ್ಕಾರದಂತೆ ಭ್ರಷ್ಟಾಚಾರ ನಡೆಸಿಲ್ಲ ಎಂದು ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಭೂಸ್ವಾಧೀನ ಕಾಯ್ದೆ ವಿರುದ್ಧವಾಗಿ ಮಾತನಾಡಿದ್ದ ರಾಹುಲ್ ಗಾಂಧಿ, ಮೋದಿ ನೇತೃತ್ವದ ಸರ್ಕಾರ ರೈತರ ಪರವಾಗಿಲ್ಲ, ಸೂಟು ಬೂಟಿನ ಕೈಗಾರಿಕೋದ್ಯಮಿಗಳ ಪರವಾಗಿದೆ, ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲು ಪದೇ ಪದೇ ಸುಗ್ರೀವಾಜ್ನೆ ಜಾರಿಗೆ ತರುತ್ತಿದೆ ಎಂದು ಆರೋಪಿಸಿದ್ದರು. ರಾಹುಲ್ ಗಾಂಧಿ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಬಿಜೆಪಿ, ಸುಗ್ರೀವಾಜ್ನೆ ಜಾರಿಗೆ ತರುವುದರಲ್ಲಿ ಕಾಂಗ್ರೆಸ್ ಕರಾಳ ಇತಿಹಾಸವನ್ನು ಹೊಂದಿದೆ. 50 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ 456 ಸುಗ್ರೀವಾಜ್ನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದೆ.