ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ 9 ದಿನಗಳ ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ಪ್ರವಾಸವು ಏ.9ರಿಂದ ಆರಂಭವಾಗಲಿದೆ. ದೇಶದ ಮೂಲ ಸೌಕರ್ಯ, ಹೂಡಿಕೆ, ರಕ್ಷಣಾ ವಲಯಗಳ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರವಾಸಕ್ಕೆ ಒತ್ತು ನೀಡಲಾಗಿದೆ.
ಮೊದಲ ಹಂತದಲ್ಲಿ ಫ್ರಾನ್ಸ್ ಗೆ ತೆರಳಲಿರುವ ಮೋದಿ, ಆರ್ಥಿಕತೆ, ರಕ್ಷಣೆ, ಇಂಧನ ಮತ್ತಿತರ ವಿಷಯಗಳ ಬಗ್ಗೆ ಅಲ್ಲಿನ ಅಧ್ಯಕ್ಷ ಪ್ರಾಂಸ್ವ ಹೊಲಾನ್ಡ್ ಜತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ, ಫ್ರಾನ್ಸ್ನ ಉದ್ಯಮ ನಾಯಕರೊಂದಿಗಿನ ಎರಡು ಸಭೆಗಳಲ್ಲೂ ಮೋದಿ ಪಾಲ್ಗೊಳ್ಳುವರು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ತಿಳಿಸಿದ್ದಾರೆ.
'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ ಪ್ರೆಂಚ್ ಕಂಪನಿಗಳು ನೆರವಾಗುತ್ತವೆ ಎನ್ನುವ ನಿರೀಕ್ಷೆಯನ್ನು ಭಾರತ ಹೊಂದಿದೆ. ನಾಲ್ಕು ದಿನ ಫ್ರಾನ್ಸ್ ನಲ್ಲಿ ತಂಗಲಿರುವ ಮೋದಿ ಅವರು ಹೊಲಾನ್ಡ್ ಜತೆ ದೋಣಿ ವಿಹಾರ ನಡೆಸುವರು. ಇದನ್ನು 'ನಾವ್ ಪೇ ಚರ್ಚಾ'(ದೋಣಿಯಲ್ಲಿ ಚರ್ಚೆ) ಎಂದು ಬಣ್ಣಿಸಲಾಗಿದೆ. '
ಏಪ್ರಿಲ್ 12ರಂದು ಜರ್ಮನಿಗೆ ಆಗಮಿಸುವ ಮೋದಿ, ಬಳಿಕ ಏಪ್ರಿಲ್ 14ರಿಂದ 16ರವರೆಗೆ ಕೆನಡಾಗೆ ಭೇಟಿ ನೀಡಿ ಸ್ವದೇಶಕ್ಕೆ ವಾಪಸ್ಸಾಗಲಿದ್ದಾರೆ. ಮೋದಿ ಪ್ರವಾಸದ ಸಂದರ್ಭದಲ್ಲಿ ಕೆನಡಾದ ಟೊರೊಂಟೊ ನಗರದಲ್ಲಿ ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ನಡೆದಂಥ ಬೃಹತ್ ಕಾರ್ಯಕ್ರಮ ನಡೆಯುವ ನಿರೀಕ್ಷೆಗಳೂ ಇವೆ.