ನವದೆಹಲಿ : ವಿಶ್ವದ ಖ್ಯಾತ ಸರ್ಚ್ ಇಂಜಿನ್ ಗೂಗಲ್ 2,80,000 ಬಳಕೆದಾರರ ಖಾಸಗಿ ಮಾಹಿತಿಯನ್ನು ಸೋರಿಕೆ ಮಾಡಿದೆ. ಬಳಕೆದಾರರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಹಾಗೂ ಈ ಮೇಲ್ ವಿವರಗಳೂ ಸೋರಿಕೆಯಾಗಿವೆ ಎಂದು ಹೇಳಲಾಗಿದೆ.
ಭದ್ರತಾ ಸಂಶೋಧಕರಿಗೆ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ನೋಂದಣಿಯಾಗಿರುವ 305,925 ವೆಬ್ಸೈಟ್ ಗಳ ಪೈಕಿ 282,867 (ಶೇ.94ರಷ್ಟು) ವೆಬ್ ಸೈಟ್ ಗಳ ವಿವರಗಳು ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.
ನೋಂದಣಿ ಮಾಡಿಕೊಂಡಿದ್ದ ವೆಬ್ ಸೈಟ್ ಗಳ ಮಾಲಿಕರು WHOIS ಮೂಲಕ ತಮ್ಮ ಖಾಸಗಿ ವಿವರಗಳನ್ನು ಗೌಪ್ಯವಾಗಿಟ್ಟಿದ್ದರು. ಆದಾಗ್ಯೂ ವಿವರಗಳು ಸೋರಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಸಂಸ್ಥೆ ತಪ್ಪನ್ನು ಸರಿಪಡಿಸುವುದಾಗಿ ತಿಳಿಸಿದೆ. ಸಾಫ್ಟ್ ವೇರ್ ದೋಷದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಗೂಗಲ್ ಬಳಕೆದಾರರಲ್ಲಿ ಸಂಸ್ಥೆ ಕ್ಷಮೆಯಾಚಿಸಿದೆ.