ಮುಂಬೈ : ಸ್ಕಾರ್ಪೇನ್ ಜಲಾಂತರ್ಗಾಮಿ ನೌಕೆಯ ಪ್ರಮುಖ ಮಾಹಿತಿಗಳು ಸೋರಿಕೆಯಾಗಿದ್ದು, ಭಾರತದ ಭದ್ರತೆಗೆ ಭಾರಿ ಪ್ರಮಾಣದ ಅಪಾಯದ ಭೀತಿ ಉಂಟಾಗಿದೆ. ಭಾರತೀಯ ನೌಕಾಪಡೆಗಾಗಿ ಆರು ಸ್ಕಾರ್ಪೇನ್ ದರ್ಜೆಯ ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದ್ದ ಫ್ರೆಂಚ್ ಕಂಪನಿಯ ಅತಿ ಸೂಕ್ಷ್ಮ ರಹಸ್ಯ ದಾಖಲೆಗಳು ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.
ಫ್ರಾನ್ಸ್ ಮೂಲದ ನೌಕಾ ತಯಾರಿಕಾ ಕಂಪನಿ ಡಿಸಿಎನ್ಎಸ್ ಸಂಸ್ಥೆ ಮೂಲಕವಾಗಿ ಮುಂಬೈನ ಡಾಕ್ ಯಾರ್ಡ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಕಾರ್ಪೀನ್ ಜಲಾಂತರ್ಗಾಮಿಗೆ ಸಂಬಂಧಿಸಿದ ಸುಮಾರು 22,400 ಪುಟಗಳಷ್ಟು ಸೂಕ್ಷ್ಮ ದಾಖಲೆಗಳು ಸೋರಿಕೆಯಾಗಿವೆ.
ಜಲಂತರ್ಗಾಮಿ ನೌಕೆಗಳ ವೇಗ, ಅದರ ಶಬ್ದ ಮಾಡುವ ಪ್ರಮಾಣ, ಆವರ್ತನ ಪ್ರಮಾಣ ಮತ್ತಿತರ ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗಿದೆ. ಇದಲ್ಲದೆ ನೌಕೆಯಲ್ಲಿರುವ ಸಿಬ್ಬಂದಿ ಶತ್ರುಗಳ ಅರಿವಿಗೆ ಬಾರದಂತೆ ಸುರಕ್ಷಿತವಾಗಿ ಸಂವಹನ ನಡೆಸಬಲ್ಲ ವ್ಯವಸ್ಥೆ ಜಲಾಂತರ್ಗಾಮಿಯಲ್ಲಿದೆ ಎಂದು ಉಲ್ಲೇಖಗೊಂಡಿದ್ದ ಮಾಹಿತಿ, ಮ್ಯಾಗ್ನೆಟಿಕ್, ಎಲೆಕ್ಟ್ರೋಮ್ಯಾಗ್ನೆಟಿಕ್, ಇನ್ಫ್ರಾರೆಡ್ ವ್ಯವಸ್ಥೆ, ಕಾರ್ಯಾಚರಣೆ ಮತ್ತು ಯುದ್ಧ ವಿಧಾನಗಳಿಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿರುವುದಾಗಿ ದಿ ಆಸ್ಟ್ರೇಲಿಯನ್ ಪತ್ರಿಕೆ ವರದಿ ತಿಳಿಸಿದೆ.
ಸಬ್ಮೆರಿನ್ಗಳ ರಹಸ್ಯ ಮಾಹಿತಿ ವಿದೇಶಗಳಲ್ಲೇ ಸೋರಿಕೆಯಾಗಿರುವ ಸಾಧ್ಯತೆ ಇದ್ದು, ಲಭ್ಯವಿರುವ ಮಾಹಿತಿಗಳ ಬಗ್ಗೆ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನೌಕಾಪಡೆ ಹೇಳಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಕ್ಷಣಾ ಇಲಾಖೆ ತನಿಖೆಗೆ ಆದೇಶಿಸಿದ್ದು, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸೇನಾಧಿಕಾರಿಗಳಿಂದ ವರದಿ ಕೇಳಿದ್ದಾರೆ.