ನವದೆಹಲಿ : ವಿವಾದಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿನ ಗ್ಯಾಂಗ್ ರೇಪ್ ಆರೋಪಿ ಮುಖೇಶ್ ಸಿಂಗ್ ಸಂದರ್ಶನಕ್ಕಾಗಿ ಚಿತ್ರ ನಿರ್ಮಾಪಕರು 40 ಸಾವಿರ ರೂಪಾಯಿ ಪಾವತಿಸಿರುವುದಾಗಿ ನವಭಾರತ್ ಟೈಮ್ಸ್ ವರದಿ ತಿಳಿಸಿದೆ.
ಮುಖೇಶ್ ಸಿಂಗ್ ಸಂದರ್ಶನಕ್ಕಾಗಿ ಚಿತ್ರ ನಿರ್ಮಾಪಕಿ ಲಿಸ್ಲೇ ಉಡ್ವಿನ್ ಹಲವಾರು ಬಾರಿ ಪ್ರಯತ್ನಿಸಿದ್ದರು. ಆದರೆ ಇದು ಮೊದಲಿಗೆ ಈಡೇರಿರಲಿಲ್ಲ. 'ಸಂದರ್ಶನ ಬೇಕು ಎಂದರೆ 2 ಲಕ್ಷ ಕೊಡಿ' ಎಂದು ಮುಕೇಶ್ ಪಟ್ಟು ಹಾಕಿದ್ದ. ಆದರೆ ಸಾಕಷ್ಟು ಚೌಕಾಸಿ ನಂತರ ಉಡ್ವಿನ್ 40 ಸಾವಿರ ಕೊಡಲು ಒಪ್ಪಿದರು. ಈ ವ್ಯವಹಾರಕ್ಕೆ ಖುಲ್ಲಾರ್ ಎಂಬಾತ ಏಜೆಂಟ್ನಂತೆ ಕೆಲಸ ಮಾಡಿದ್ದ. ಈ ವ್ಯವಹಾರ ಕುದುರಿದ ನಂತರ, ಮುಕೇಶ್ ಸಂದರ್ಶನಕ್ಕೆ ಗೃಹ ಸಚಿವಾಲಯ ಅನುಮತಿ ನೀಡಿತ್ತು.
ವರದಿಯ ಮೂಲಗಳ ಪ್ರಕಾರ, ಸಿಂಗ್ ತನ್ನ ಸಂದರ್ಶನಕ್ಕಾಗಿ ಬರೋಬ್ಬರಿ 2 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ. ಸಾಕಷ್ಟು ಬಾರಿ ಚರ್ಚೆ ನಡೆಸಿದ ನಂತರ 40 ಸಾವಿರ ರೂಪಾಯಿ ಹಣ ಪಡೆದ ನಂತರ ಸಂದರ್ಶನಕ್ಕೆ ಸಿಂಗ್ ಒಪ್ಪಿಗೆ ನೀಡಿದ್ದ. ಈ ಹಣವನ್ನು ಸಿಂಗ್ ಕುಟುಂಬದವರು ಪಡೆದಿದ್ದರು ಎಂದು ತನಿಖಾ ವರದಿ ಹೇಳಿದೆ.
2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ಪೈಶಾಚಿಕ ಕೃತ್ಯ ಖಂಡಿಸಿ ದೇಶದ ಮೂಲೆ, ಮೂಲೆಯಲ್ಲಿ ಸಾವಿರಾರು ಜನರು ನಡೆಸಿದ ಪ್ರತಿಭಟನೆಯನ್ನು ವೀಕ್ಷಿಸಿದ್ದ ಬ್ರಿಟನ್ ಚಿತ್ರ ನಿರ್ಮಾಪಕಿ ಲಿಸ್ಲೇ ನಿರ್ಭಯಾ ಕುರಿತು ಸಾಕ್ಷ್ಯ ಚಿತ್ರ ಮಾಡಲು ಮುಂದಾಗಿದ್ದು, ಲಿಸ್ಲೇ ಈ ಸಾಕ್ಷ್ಯಚಿತ್ರಕ್ಕಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.