ನವದೆಹಲಿ : 'ನಿರ್ಭಯಾ' ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದ ಲೆಸ್ಲಿ ಉಡ್ವಿನ್ ಗೆ ತಿಹಾರ್ ಜೈಲಿನಲ್ಲಿ ಅಪರಾಧಿಗಳ ಚಿತ್ರೀಕರಣಕ್ಕೆ ಅನುಮತಿ ನೀಡುವ ಮೂಲಕ ಗೃಹ ಇಲಾಖೆ ತನ್ನ ನಿಬಂಧನೆಗಳನ್ನು ಉಲ್ಲಂಘಿಸಿತ್ತು ಎಂಬ ಅಂಶ ಬಯಲಾಗಿದೆ.
ಜೈಲಿಗೆ ಭೇಟಿ ನೀಡುವ ವಿದೇಶಿಗರ ಹಿನ್ನೆಲೆಯನ್ನು ತಪಾಸಣೆ ಮಾಡುವುದು ಕಡ್ಡಾಯವಾಗಿರುತ್ತದೆ. ಆದರೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಲೆಸ್ಲಿ ಉಡ್ವಿನ್ ಅವರ ಹಿನ್ನೆಯನ್ನು ಪರಿಶೀಲಿಸದೇ ಅರ್ಜಿಯನ್ನು ಅಂಗೀಕರಿಸಲಾಗಿತ್ತು ಎಂದು ತಿಳಿದುಬಂದಿದೆ.
2012ರ ಡಿಸೆಂಬರ್ ನಲ್ಲಿ ಬಿಬಿಸಿಯ ಲೆಸ್ಲಿ ಉಡ್ವಿನ್ ತಿಹಾರ್ ಜೈಲಿಗೆ ಭೇಟಿ ನೀಡಿ ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿಯನ್ನು ಸಂದರ್ಶನ ಮಾಡಲು ಗೃಹ ಸಚಿವಾಲಯಕ್ಕೆ ಅರ್ಜಿ ಬರೆದು ಮನವಿ ಸಲ್ಲಿಸಿದ್ದರು. ಇಲಾಖೆಯ ಕಾನೂನಿನ ಪ್ರಕಾರ, ಯಾವುದೇ ವಿದೇಶಿ ಪತ್ರಕರ್ತರಾಗಲೀ ಅಥವಾ ಚಿತ್ರ ನಿರ್ಮಾಣ ಮಾಡುವವರಿಗಾಗಲಿ ಜೈಲಿಗೆ ತೆರಳಲು ಅನುಮತಿ ನೀಡುವ ಮುನ್ನ, ಅವರ ಹಿನ್ನೆಲೆಯನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ. ಆದರೆ ಲೆಸ್ಲಿ ಉಡ್ವಿನ್ ಅವರಿಗೆ ಅನುಮತಿ ನೀಡುವಾಗ ಅವರ ಹಿನ್ನೆಲೆಯನ್ನು ಪರಿಶೀಲನೆ ಮಾಡಲಾಗಿಲ್ಲ ಎಂಬ ಅಂಶ ಈಗ ಬಯಲಾಗಿದೆ. ಈ ಮೂಲಕ ಗೃಹ ಇಲಾಖೆ ಅಧಿಕಾರಿಗಳು ನಿಬಂಧನೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ.
ಐಬಿ, ರಾ ಅಥವಾ ದೆಹಲಿ ಪೊಲೀಸರ ಸಹಾಯದೊಂದಿಗೆ ಉಡ್ವಿನ್ ಅವರ ಹಿನ್ನಲೆಯನ್ನು ಪರಿಶೀಲಿಸಲು ಸಾಧ್ಯವಿತ್ತು ಎಂದು ಗೃಹ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.