ನ್ಯೂಯಾರ್ಕ್ : ನಿಷೇಧಿತ ನಿರ್ಭಯಾ ಸಾಕ್ಷ್ಯಚಿತ್ರ ಅಮೆರಿಕಾದಲ್ಲಿ ಪ್ರಸಾರವಾಗಲು ಸಿದ್ಧವಾಗಿದೆ. ನ್ಯೂಯಾರ್ಕ್ ನ ಸಿಟಿ ಯೂನಿವರ್ಸಿಟಿಯಲ್ಲಿ ಮಾ.9ರಂದು ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭದಲ್ಲಿ ಇತ್ತೀಚೆಗಷ್ಟೇ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಮೇರಿ ಸ್ಟ್ರೀಪ್ ಸಹ ಭಾಗವಹಿಸಲಿದ್ದಾರೆ. ಈ ಮೂಲಕ ಭಾರತದಲ್ಲಿ ಬ್ಯಾನ್ ಮಾಡಲಾಗಿರುವ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದಾರೆ. ತೀವ್ರ ವಿವಾದಕ್ಕೆ ಕಾರಣವಾಗಿರುವ ಬಿಬಿಸಿ ನಿರ್ಮಿತ ಸಾಕ್ಷ್ಯಚಿತ್ರವನ್ನು ನಿಷೇಧದ ಹೊರತಾಗಿಯೂ ಬಿಬಿಸಿ ಪ್ರಸಾರ ಮಾಡಿತ್ತು. ಭಾರತದಲ್ಲಿ ಸಾಕ್ಷ್ಯಚಿತ್ರಕ್ಕೆ ನಿಷೇಧ ವಿಧಿಸಲಾಗಿತ್ತು.
ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್, ಅಪರಾಧಿಗಳ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ನೀಡದೇ ಗೃಹ ಇಲಾಖೆ ಅಧಿಕಾರಿಗಳನ್ನು ಯಾಮಾರಿಸಿದ್ದರು, ಇಷ್ಟೇ ಅಲ್ಲದೇ ದೆಹಲಿ ಗ್ಯಾಂಗ್ ರೇಪ್ ನ ಅಪರಾಧಿ ಮುಖೇಶ್ ಸಿಂಗ್ ಗೆ 40 ಸಾವಿರ ರೂಪಾಯಿಗಳನ್ನು ನೀಡಿದ್ದರು.
ವಿವಾದಿತ ಸಾಕ್ಷ್ಯಚಿತ್ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪ್ರಸಾರವಾಗಬೇಕಿತ್ತು. ಆದರೆ ಭಾರತ ನಿಷೇಧ ವಿಧಿಸಿದ್ದರ ಹಿನ್ನೆಲೆಯಲ್ಲಿ ಅದು, ನಿಗದಿಗೂ ಮುನ್ನವೇ ಪ್ರಸಾರವಾಗಿದೆ.