ವಾಷಿಂಗ್ ಟನ್ : ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ದಿನಾಚರಣೆಯ ಅಭಿಯಾನವನ್ನು ವಿಶ್ವಸಂಸ್ಥೆ ಮಾನ್ಯ ಮಾಡಿದ್ದರೆ, ಅಮೆರಿಕಾ ರಾಜಕಾರಣಿಗಳು ಮಾತ್ರ ತಮ್ಮ ನೆಲದಲ್ಲಿ ಯೋಗಾಭ್ಯಾಸವನ್ನು ದಮನಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಯೋಗಾಭ್ಯಾಸ ಮಾಡುವಾಗ ಧರಿಸುವ ಪ್ಯಾಂಟ್(ಯೋಗಾ ಪ್ಯಾಂಟ್) ಪ್ರಚೋದನಾಕಾರಿಯಾಗಿರುವುದರಿಂದ ಅಮೆರಿಕಾಗೆ ಅತಿ ದೊಡ್ಡ ಸವಾಲು ಹಾಕುತ್ತಿದೆ ಎಂದು ಮೊಂಟಾನಾ ಪ್ರತಿನಿಧಿ ಡೇವಿಡ್ ಮೂರ್ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಡೇವಿಡ್ ಮೂರ್, ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಯೋಗಾ ಪ್ಯಾಂಟ್ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದಕ್ಕಾಗಿಯೆ ಮಸೂದೆಯನ್ನೂ ಸಿದ್ಧಪಡಿಸಲಾಗಿದ್ದು ಬಿಗಿಯಾದ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಬಿಗಿ ಉಡುಪು ಧರಿಸುವುದನ್ನು ನಿಷೇಧಿಸುವ ಹೆಸರಿನಲ್ಲಿ ಮಹಿಳೆಯರು ಯೋಗಾ ಪ್ಯಾಂಟ್ ನ್ನು ಧರಿಸುವುದನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಡೇವಿಡ್ ಮೂರ್ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಮಸೂದೆಯಲ್ಲಿ ಬದಲಾವಣೆ ತರಲಾಗಿದ್ದು ಪುರುಷರೂ ಸಹ ಬಿಗಿಯಾದ ಉಡುಪುಗಳನ್ನು ಧರಿಸಬಾರದು ಎಂದು ನಿಷೇಧ ವಿಧಿಸಲಾಗಿದೆ. ಆದಾಗ್ಯೂ ಬಿಗಿ ಉಡುಪು ಧರಿಸುವುದನ್ನು ನಿಷೇಧಿಸುವುದನ್ನು ಮುಂದಿಟ್ಟುಕೊಂಡು ಯೋಗಾ ಪ್ಯಾಂಟ್ ಗಳ ಮೇಲೆ ಅಮೆರಿಕಾ ನಿಷೇಧ ಹೇರುತ್ತಿದೆ ಎಂಬ ಆರೋಪ ಮಾತ್ರ ಬಲವಾಗಿ ಕೇಳಿಬಂದಿದೆ.