ಬೆಂಗಳೂರು : 'ಪ್ರವೀಣ್ ತೊಗಾಡಿಯಾ'ಗೆ ನಿಷೇಧ ಹೇರಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ನಡೆದ ಬಿಜೆಪಿ ಶಾಸಕರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ಪಷ್ಟನೆ ನೀಡಿದ್ದಾರೆ.
ಮುಸ್ಲಿಮರು ನಡೆಸುವ ಕಾರ್ಯಕ್ರಮಗಳಿಗೆ ಸಂಘಟನೆ ಮುಖ್ಯಸ್ಥರ ಆಗಮನಕ್ಕೆ ಅನುಮತಿ ನೀಡುವುದು, ಹಿಂದೂಗಳು ನಡೆಸುವ ಕಾರ್ಯಕ್ರಮದಲ್ಲಿ ಸಂಘಟನೆ ಮುಖ್ಯಸ್ಥರಿಗೆ ನಿಷೇಧ ಹೇರುವುದು ಸರಿಯಲ್ಲ. ಈ ರೀತಿ ಮಾಡಿದರೆ ಸರ್ಕಾರ ಜಾತಿ ರಾಜಕಾರಣ ಮಾಡಿದಂತಾಗುತ್ತದೆ. ಆದ್ದರಿಂದ ಪ್ರವೀಣ್ ತೊಗಾಡಿಯಾ ಅವರು ಬೆಂಗಳೂರಿಗೆ ಆಗಮಿಸುವುದಕ್ಕೆ ವಿಧಿಸಿರುವ ನಿಷೇಧವನ್ನು ಸರ್ಕಾರ ಹಿಂಪಡೆಯಬೇಕೆಂದು ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದ್ದಾರೆ.
ಬಿಜೆಪಿ ಶಾಸಕರೊಂದಿಗಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು ನಾನು ಈಗಲೂ ಜೆಡಿಎಸ್ ನಲ್ಲೇ ಇದ್ದೇನೆ, ಒಳ್ಳೆಯ ವಿಷಯ, ಅಭಿವೃದ್ಧಿ ವಿಚಾರಗಳಲ್ಲಿ ಯಾರೇ ಪ್ರತಿಭಟನೆ ಮಾಡಿದರೂ ಬೆಂಬಲಿಸುವುದಾಗಿ ಮಲ್ಲಿಕಾರ್ಜುನ ಖೂಬಾ ಹೇಳಿದ್ದಾರೆ.
ಸರ್ಕಾರ, ವಿಶ್ವಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಬೆಂಗಳೂರಿಗೆ ಆಗಮಿಸದಂತೆ ನಿಷೇಧ ಹೇರಿರುವುದನ್ನು ವಿರೋಧಿಸಿ ಅಧಿವೇಶನದ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಪಾಲ್ಗೊಂಡಿದ್ದು ಅಚ್ಚರಿ ಉಂಟುಮಾಡಿತ್ತು.