ಡೆಹ್ರಾಡೂನ್ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನಗೊಂಡು ಹಿರಿಯ ನಾಯಕಿ ಜಯಂತಿ ನಟರಾಜನ್ ಪಕ್ಷಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಪಕ್ಷದ ವಿರುದ್ಧ ರ್ಯಾಲಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿಯಾಗಿದ್ದಾಗ ತಾವು ಕೈಗೊಂಡ ನಿರ್ಧಾರಗಳನ್ನು ಜಾರಿಗೆ ತರದಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ರ್ಯಾಲಿ ನಡೆಸುವುದಾಗಿ ಬಹುಗುಣ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಪತ್ರ ಬರೆದಿರುವ ಅವರು, ತಮ್ಮ ಅವಧಿಯ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರದಿದ್ದರೆ ಫೆ.15ರಂದು ಸರ್ಕಾರದ ವಿರುದ್ಧ ಸಮಾವೇಶ ಆಯೋಜಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಉತ್ತರಾಖಂಡ ಕಾಂಗ್ರೆಸ್ಸಿನಲ್ಲಿ ರಾವತ್ ಹಾಗೂ ಬಹುಗುಣ ಪರಸ್ಪರ ಎದುರಾಳಿಗಳಾಗಿದ್ದಾರೆ. ಕಳೆದ ವರ್ಷ ಫೆ.1ರಂದು ಬಹುಗುಣ ಅವರನ್ನು ಕೆಳಗಿಳಿಸಿ ರಾವತ್ ಮುಖ್ಯಮಂತ್ರಿ ಗದ್ದುಗೆಗೇರಿದ್ದರು.