ನವದೆಹಲಿ : ಬಿಜೆಪಿಗೆ ಸೇರ್ಪಡೆಯಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿಯವರನ್ನು ದೆಹಲಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಬಗ್ಗೆ ತೀರ್ಮಾನವಾಗಿಲ್ಲ ಎಂದು ಗೃಹ ಸಚಿವ ರಾಜನಾಥ್ಸಿಂಗ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಅವರು ಪ್ರಧಾನಿ ನರೇಂದ್ರಮೋದಿ ನಾಯಕತ್ವ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ, ಅವರನ್ನೇ ಸಿಎಂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ ಚುನಾವಣಾ ಪ್ರಚಾರ ನಡೆಸಲು ಪಕ್ಷ ತೀರ್ಮಾನಿಸಿಲ್ಲ ಎಂದು ಹೇಳಿದರು.
ಕಿರಣ್ಬೇಡಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಬೇಕೆ ಎಂಬುದರ ಬಗ್ಗೆ ಪಕ್ಷದ ಸಂಸದೀಯ ಮಂಡಳಿ ತೀರ್ಮಾನಿಸುತ್ತದೆ. ಅಲ್ಲಿಯವರೆಗೂ ಈ ಬಗ್ಗೆ ಎದ್ದಿರುವ ಸುದ್ದಿಗಳೆಲ್ಲವೂ ಊಹಾಪೋಹ ಎಂದು ರಾಜನಾಥ್ಸಿಂಗ್ ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಲು ತೀರ್ಮಾನಿಸಿದೆ. ಏಕ ವ್ಯಕ್ತಿ ನಾಯಕತ್ವದಲ್ಲಿ ನಂಬಿಕೆಯಿಲ್ಲ ಎಂದರು.