ನವದೆಹಲಿ : ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ಪುದುಚೆರಿಯ ರಾಜ್ಯಪಾಲರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ನೇಮಕ ಮಾಡಲಾಗಿದೆ.
ಇಂತಹ ಅದ್ಭುತ ಅವಕಾಶ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ ಎಂದು ಕಿರಣ್ ಬೇಡಿ ಅವರು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಇತ್ತೀಚೆಗೆ ಪುದುಚೆರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ 30 ಸ್ಥಾನಗಳಲ್ಲಿ ಕಾಂಗ್ರೆಸ್ 15 ಮತ್ತು ಕಾಂಗ್ರೆಸ್ ನ ಮೈತ್ರಿ ಪಕ್ಷ ಡಿಎಂಕೆ 2 ಸ್ಥಾನ ಪಡೆಯುವ ಮೂಲಕ ಅಧಿಕಾರದ ಗದ್ದುಗೆಗೇರಲು ಸಿದ್ಧತೆ ನಡೆಸಿವೆ. ಕಿರಣ್ ಬೇಡಿ ಅಜಯ್ ಕುಮಾರ್ ಸಿಂಗ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ನೇಮಕವಾಗಿದ್ದಾರೆ.
1972ರಲ್ಲಿ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಯಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. 30 ವರ್ಷಗಳ ಕಾಲ ಖಡಕ್ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಕಿರಣ್ ಬೇಡಿ,2007ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ನಂತರ 2011ರಲ್ಲಿ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡಿದ್ದರು. 2012ರಲ್ಲಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಪ್ರಾರಂಭಿಸಿದ ನಂತರ ಬೇಡಿ ಆಂದೋಲನದಿಂದ ದೂರ ಸರಿದಿದ್ದರು. ನಂತರ 2015ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಬೇಡಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ಸ್ಪರ್ಧಿಸಿದ್ದರು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ಬೇಡಿ ಕೃಷ್ಣ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಲನುಭವಿಸಿದ್ದರು.