ನವದೆಹಲಿ : ಮುಂದಿನ ತಿಂಗಳ 3ನೇ ವಾರದಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಎನ್.ಡಿ.ಎ ಸರ್ಕಾರದ ಎರಡನೇ ಬಜೆಟ್ ಮಂಡನೆಯಾಗಲಿದೆ.
ಸರ್ಕಾರ ರಚನೆಯಾದ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಥಮ ಬಜೆಟ್ ಮಂಡಿಸಿದ್ದರು.
ಪ್ರಸಕ್ತ ಬಜೆಟ್ ಅಧಿವೇಶನದ ವೇಳೆ ವಿಮಾ ವಿಧೇಯಕ, ಭೂಸ್ವಾಧೀನ ಮಸೂದೆ ಸೇರಿ ಪ್ರಮುಖ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದನ್ನು ಪ್ರತಿಪಕ್ಷಗಳು ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆ ಹೆಚ್ಚಾಗಿದೆ.
ಡಿ.23ರಂದು ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಂತೆಯೇ ಕೋಲಾಹಲ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ವೆಂಕಯ್ಯನಾಯ್ಡು ಪ್ರತಿಪಕ್ಷಗಳ ವಾಗ್ದಾಳಿಯನ್ನು ಎದುರಿಸುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಬಜೆಟ್ ಬಗ್ಗೆ ಜನಸಾಮಾನ್ಯರಲ್ಲಿ ನಿರೀಕ್ಷೆಗಳು ಹೆಚ್ಚಿದ್ದು ಬೆಲೆ ಏರಿಕೆ ತಡೆಗಟ್ಟುವುದಕ್ಕೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ.