ನವದೆಹಲಿ : ಕಪ್ಪು ಹಣ ಘೋಷಣೆಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವಿನ ಒಳಗೆ 64,275 ಮಂದಿ ತಮ್ಮ ಬಳಿ ಇರುವ ಅಕ್ರಮ ಸಂಪತ್ತನ್ನು ಬಹಿರಂಗ ಪಡಿಸಿದ್ದು, ಈ ಮೂಲಕ 65,250 ಕೋಟಿ ರೂ.ಕಪ್ಪು ಹಣ ಘೋಷಣೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ಈ ಮೂಲಕ ಕೇಂದ್ರ ಸರ್ಕಾರಕ್ಕೆ 29,362 ಕೋಟಿ ರುಪಾಯಿ ಆದಾಯ ತೆರಿಗೆ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ. ಈಗ ಘೋಷಿಸಲಾಗಿರುವ ರು.65,250 ಕೋಟಿಯಲ್ಲಿ ಶೇಕಡ 45ರಷ್ಟು ಹಣ ತೆರಿಗೆ ಹಾಗೂ ದಂಡದ ರೂಪದಲ್ಲಿ ಸರ್ಕಾರದ ಬೊಕ್ಕಸ ಸೇರಲಿದ್ದು, ಇದನ್ನು ಸಾಮಾಜಿಕ ಯೋಜನೆಗಳಡಿ ಜನಕಲ್ಯಾಣಕ್ಕಾಗಿ ಬಳಸಲಾಗುವುದು ಎಂದು ಹೇಳಿದ್ದಾರೆ.
ಕಪ್ಪು ಹಣ ಸ್ವಯಂ ಘೋಷಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಜೂನ್ 1ರಿಂದ ವಿಶೇಷ ಯೋಜನೆ ಆರಂಭಿಸಿ, ಸೆಪ್ಟೆಂಬರ್ 30ರವರೆಗೆ ಗಡುವು ನೀಡಿತ್ತು. ಈ ಗಡುವಿನೊಳಗೆ 64,275 ಮಂದಿ ತಮ್ಮ ಬಳಿ ಇರುವ ಅಕ್ರಮ ಸಂಪತ್ತಿನ ಕುರಿತು ಘೋಷಣೆ ಮಾಡಿದ್ದಾರೆ.