ನವದೆಹಲಿ : ಅರಬ್ಬೀಸಮುದ್ರದಲ್ಲಿ ಪಾಕ್ ಬೋಟ್ ಪತ್ತೆ ಪ್ರಕರಣ ಸಮುದ್ರದಲ್ಲಿ ಪತ್ತೆಯಾದ ಬೋಟ್ ಗಳು ಪಾಕಿಸ್ತಾನದ್ದು ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಜ.1ರಂದುಪಾಕ್ ನ 2ಬೋಟ್ ಗಳು ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿತ್ತು. ಅಂತರಾಷ್ಟ್ರೀಯ ಜಲಮಾರ್ಗದಲ್ಲಿ ಮತ್ತೊಂದು ಬೋಟ್ ಪತ್ತೆಯಾಗಿತ್ತು. ಬೋಟ್ ನಲ್ಲಿದವರು ಕಳ್ಳಸಾಗಣೆದಾರರಲ್ಲ. 2 ಬೋಟ್ ಗಳು ಸಾಗುತ್ತಿದ್ದ ಮಾರ್ಗ ಸರಿಯಿರಲಿಲ್ಲ ಎಂದು ತಿಳಿಸಿದರು.
ಸಾಮಾನ್ಯ ಜಲಮಾರ್ಗದಲ್ಲಿ ಬೋಟ್ ಸಂಚರಿಸುತ್ತಿರಲಿಲ್ಲ. ಬೋಟ್ ಸಾಗಿದ ಮಾರ್ಗ ಮೀನುಗಾರಿಕಾ ಮಾರ್ಗವಾಗಿರಲಿಲ್ಲ. ಮೀನುಗಾರಿಕೆಗೆ ಬಳಸುವ ಬೋಟ್ ಕೂಡ ಅದಾಗಿರಲಿಲ್ಲ. ಅಲ್ಲದೇ ಬೋಟ್ ತಾನಿದ್ದ ಸ್ಥಳದಲ್ಲೇ ಸುತ್ತುಹೊಡೆಯುತ್ತಿತ್ತು. ಹೀಗಾಗಿ ಅನುಮಾನಗೊಂಡು 12-14ಗಂಟೆಗಳ ಕಾಲ ನೌಕಾಪಡೆ ಬೋಟ್ ಗಳ ಮೇಲೆ ಕಣ್ಗಾವಲು ಇಟ್ಟಿತ್ತು. ಬಳಿಕ ಕರಾವಳಿ ಕಾವಲು ಪಡೆ ಬೋಟ್ ಹಿಂಬಾಲಿಸಿದೆ ಎಂದು ವಿವರಿಸಿದರು.
ಹಿಂಬಾಲಿಸುತ್ತಿದ್ದಾಗಲೇ ಬೋಟ್ ಸ್ಫೋಟವಾಗಿದೆ. ಬೋಟ್ ನಲ್ಲಿದ್ದವರು ಸ್ಮಗ್ಲರ್ ಗಳಾಗಿದ್ದರೆ ತಮ್ಮನ್ನು ತಾವು ಸ್ಫೋಟಿಸಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ. ಅಲ್ಲದೇ ಪಾಕ್ ಗುಪ್ತಚರ ಇಲಾಖೆ ಜತೆ ಸಂಪರ್ಕದಲ್ಲಿ ಇರುತ್ತಿರಲಿಲ್ಲ ಎಂದರು.
ಈ ಬೋಟ್ ಗಳು ಪಾಕ್ ಸಂಪರ್ಕದಲ್ಲಿ ಇದ್ದಿದ್ದು ನಿಜ. ಈ ಬಗ್ಗೆ ಗುಪ್ತಚರ ಇಲಾಖೆ ನಿಖರ ಮಾಹಿತಿ ನೀಡಿದೆ. ತನಿಖೆ ಬಳಿಕ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ತಿಳಿಸಿದರು.