ಚೆನ್ನೈ : ಡಿಎಂಕೆ ಪಕ್ಷಕ್ಕೆ ತನ್ನನ್ನೇ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಬೇಕು, ಇಲ್ಲದಿದ್ದರೆ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಡಿಎಂಕೆ ವರಿಷ್ಠ ಎಂ.ಕರುಣಾನಿಧಿ ಪುತ್ರ, ಪಕ್ಷದ ಖಚಾಂಚಿ ಎಂಕೆ ಸ್ಟಾಲಿನ್ ಬೆದರಿಕೆ ಹಾಕುವ ಮೂಲಕ ಅಪ್ಪ, ಮಗನ ನಡುವಿನ ಜಂಗಿಕುಸ್ತಿ ಹೊರಬಿದ್ದಂತಾಗಿದೆ.
ಮೂಲಗಳ ಪ್ರಕಾರ, ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಮೇಲೆ ಸ್ಟಾಲಿನ್ ಕಣ್ಣಿಟ್ಟಿದ್ದಾರೆ. ಪ್ರಸ್ತುತ ಡಿಎಂಕೆ ಪಕ್ಷದ ಹಿರಿಯ ಮುಖಂಡ ಕೆ.ಅನ್ಬಗನ್ ಪ್ರಧಾನ ಕಾರ್ಯದರ್ಶಿ ಹುದ್ದೆಯ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷದ ಖಚಾಂಚಿ ಹುದ್ದೆಯಲ್ಲಿ ಮುಂದುವರಿಯವಂತೆ ಸ್ಟಾಲಿನ್ ಗೆ ಹೇಳಿದಾಗ, ತನಗೆ ಪ್ರಧಾನ ಕಾರ್ಯದರ್ಶಿ ಪಟ್ಟ ನೀಡಬೇಕು ಇಲ್ಲದಿದ್ದರೆ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಡಿಎಂಕೆ ಪಕ್ಷದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಚಾಂಚಿ ಹಾಗೂ ಆಡಿಟ್ ಸಮಿತಿಯ ನಾಲ್ಕು ಹುದ್ದೆಗಳ ಸ್ಥಾನಕ್ಕೆ ಜನವರಿ 9ರಂದು ಚುನಾವಣೆ ನಡೆಯಲಿದೆ. ಜನವರಿ 7 ನಾಮಿನೇಷನ್ ಸಲ್ಲಿಸುವ ಕೊನೆಯ ದಿನವಾಗಿದೆ. ಆ ಹಿನ್ನೆಲೆಯಲ್ಲಿ ಪಕ್ಷದ ಉನ್ನತ ಹುದ್ದೆಗಾಗಿ ಅಪ್ಪ-ಮಗನ ನಡುವೆ ಜಟಾಪಟಿ ಆರಂಭವಾಗಿದೆ ಎಂದು ಮೂಲಗಳು ಹೇಳಿವೆ.