ಮುಂಬೈ : ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಕ್ ಎನ್ ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗೆ ಸಿ.ಬಿ.ಐ ಕ್ಲೀನ್ ಚಿಟ್ ನೀಡಿದೆ.
ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಕ್ ಎನ್ ಕೌಂಟರ್ ಪ್ರಕರಣವನ್ನು ನಕಲಿ ಎಂದು ಆರೋಪಿಸಿ, ಇದರಲ್ಲಿ ಅಮಿತ್ ಶಾ ಅವರ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಆದರೆ ಆರೋಪ ಎದುರಿಸುತ್ತಿದ್ದ ಅಮಿತ್ ಶಾ ಅವರಿಗೆ ಸಿ.ಬಿ.ಐ ವಿಶೇಷ ನ್ಯಾಯಾಲಯ ಕ್ಲೀನ್ ಚೀಟಿ ನೀಡಿದ್ದು, ಶಾ ಆರೋಪದಿಂದ ಮುಕ್ತರಾಗಿದ್ದಾರೆ.
ಅಮಿತ್ ಶಾ ಗುಜರಾತ್ ನ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಸೊಹ್ರಾಬುದ್ದೀನ್ ಶೇಕ್ ಎನ್ ಕೌಂಟರ್ ಪ್ರಕರಣ ನಡೆದಿತ್ತು. ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಸಿಲುಕಿಸಲು ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಸಿಬಿಐಯನ್ನು ಬಳಸಿಕೊಂಡಿತ್ತು ಎಂಬ ಆರೋಪ ಕೇಳಿಬಂದಿತ್ತು.
ಕೇವಲ ವದಂತಿಗಳನ್ನು ಆಧರಿಸಿ ಒಬ್ಬ ವ್ಯಕ್ತಿಯ ವಿರುದ್ಧ ಆರೋಪ ಹೊರಿಸುವಂತಿಲ್ಲ ಎಂದು ಶಾ ಪರ ವಕೀಲರು ಸಿ.ಬಿ.ಐ ನ್ಯಾಯಾಲಯದ ವಿಚಾರಣೆ ವೇಳೆ ವಾದ ಮಂಡಿಸಿದ್ದರು. ವಾದ ವಿವಾದಗಳನ್ನು ಆಲಿಸಿದ್ದ ಸಿ.ಬಿ.ಐ ವಿಶೇಷ ನ್ಯಾಯಾಲಯ ಅಮಿತ್ ಶಾ ನಿರ್ದೋಷಿ ಎಂದು ತೀರ್ಪು ನೀಡಿದೆ. ಸಿ.ಬಿ.ಐ ನ್ಯಾಯಾಲಯದ ತೀರ್ಪಿನಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ರಿಲೀಫ್ ದೊರೆತಿದೆ.