ಬೆಳಗಾವಿ : 'ಬೆಳಗಾವಿ'ಯ ಸುವರ್ಣ ವಿಧಾನಸೌಧದಲ್ಲಿ 10 ದಿನಗಳು ನಡೆದ ಅಧಿವೇಶನ ಸಮಾಧಾನಕರವಾಗಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿ.20ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಳಿಗಾಲದ ವಿಧಾನಸಭೆಯ ಕಾರ್ಯಕಲಾಪಗಳು ತೃಪ್ತಿ ತರುವ ನಿಟ್ಟಿನಲ್ಲಿ ಜರುಗಲಿಲ್ಲ ಎಂಬ ನೋವು ಉಂಟು ಮಾಡಿದೆ. ಈ ಅಧಿವೇಶನ ಉತ್ತರ ಕರ್ನಾಟಕಕ್ಕೆ ಸೀಮಿತವಾಗಿ ಕರೆದಿರಲಿಲ್ಲ. ಕರ್ನಾಟಕದ ಜನರ ಜ್ವಲಂತ ಸಮಸ್ಯೆ ಪ್ರತಿದ್ವನಿಸಿ ಪರಿಹಾರ ದೊರೆಯಬೇಕಾಗಿತ್ತು. ಆದರೂ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆಗೆ 2 ದಿನ ಅವಕಾಶ ಮಾಡಿಕೊಡಲಾಗಿತ್ತು ಎಂದು ಸ್ಪೀಕರ್ ಹೇಳಿದ್ದಾರೆ.
ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುವುದಕ್ಕಿಂತ ಹೆಚ್ಚು ಬೇರೆ ವಿಚಾರವೇ ಸದನದಲ್ಲಿ ಹೆಚ್ಚು ಚರ್ಚೆಗೊಳಗಾಯಿತು ಎಂದು ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ಪ್ರತಿಪಕ್ಷದ ಸ್ಥಾನ ನಿರ್ವಹಿಸಲಿಲ್ಲ. ಬದಲಾಗಿ ಸಭಾಧ್ಯಕ್ಷರ ಜವಾಬ್ದಾರಿಯನ್ನು ನಿರ್ವಹಿಸಿ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದೇನೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.