Untitled Document
Sign Up | Login    
Dynamic website and Portals
  
October 2, 2016

ಕಾವೇರಿ ವಿವಾದ: ಅ.3ರಂದು ಮತ್ತೆ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶ

ಬೆಂಗಳೂರು : ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಮುಂದಿನ ಕ್ರಮ ಕುರಿತು ಚರ್ಚಿಸಲು ಸೋಮವಾರ ಅಕ್ಟೋಬರ್ 3 ರಂದು ಮತ್ತೆ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನವನ್ನು ಕರೆಯಲು ಸರ್ವಪಕ್ಷ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸರ್ವ ಪಕ್ಷಗಳ ಸದನ ನಾಯಕರು, ಕೇಂದ್ರ ಸಚಿವರನ್ನು ಒಳಗೊಂಡಂತೆ ರಾಜ್ಯದ ಎಲ್ಲಾ ಸಂಸದರು. ಕಾವೇರಿ ಕೊಳ್ಳದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ನೀರಾವರಿ ತಜ್ಞರು, ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸ್ವೀಕೃತವಾದ ಸಲಹೆಗಳ ಸಾಧಕ-ಬಾಧಕಗಳನ್ನು ಪರಾಮರ್ಶಿಸಲು ತುರ್ತು ರಾಜ್ಯ ಮಂತ್ರಿ ಪರಿಷತ್ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೊಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.

ಭಾರತ ಸರ್ವೋಚ್ಛ ನ್ಯಾಯಾಲಯವು ಸೆಪ್ಟೆಂಬರ್ 30 ರಂದು ನೀಡಿದ ತೀರ್ಪಿನಲ್ಲಿ ಮೂರು ಅಂಶಗಳಿವೆ. ಅದರಲ್ಲಿ ಮೊದಲನೆಯದು ಅಕ್ಟೋಬರ್ 1 ರಿಂದ 6 ರ ವರೆಗೆ ಆರು ದಿನಗಳ ಕಾಲ ತಮಿಳು ನಾಡಿಗೆ ಪ್ರತಿ ದಿನ ಆರು ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂಬುದಾಗಿದೆ. ಆದರೆ, ರಾಜ್ಯ ವಿಧಾನ ಮಂಡಲದ ಉಭಯ ಸದನಗಳು ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಲ್ಲಿ ಲಭ್ಯವಿರುವ 27.8 ಟಿ ಎಂ ಸಿ ನೀರನ್ನು ಮಂಡ್ಯ ಮತ್ತು ಮೈಸೂರು ಸೇರಿದಂತೆ ಸುತ್ತ-ಮುತ್ತಲ ಗ್ರಾಮಗಳು-ಪಟ್ಟಣಗಳು ಹಾಗೂ ಬೆಂಗಳೂರು ಮಹಾ ನಗರಕ್ಕೆ ಕುಡಿಯುವ ನೀರು ಉದ್ದೇಶಕ್ಕಾಗಿ ಸಂರಕ್ಷಿಸುವಂತೆ ಸೂಚಿಸಿ ಸೆಪ್ಟೆಂಬರ್ 23 ರಂದು ನಿರ್ಣಯ ಕೈಗೊಂಡಿದೆ. ಸದನದ ನಿರ್ಣಯದ ಪಾಲನೆ ಸರ್ಕಾರದ ಜವಾಬ್ದಾರಿಯಾಗಿದೆ.

ಅಲ್ಲದೆ, ಕಾವೇರಿ ಕೊಳ್ಳದ ರಾಜ್ಯದಲ್ಲಿನ ಬೆಳೆ ಕ್ಷೇತ್ರದಲ್ಲಿ ಬೆಳೆದಿರುವ ಬೆಳೆಗಳು ಒಣಗುತ್ತಿದೆ. ಬೆಳೆದು ನಿಂತಿರುವ ಈ ಬೆಳೆಗಳನ್ನು ರಕ್ಷಿಸಲು ನೀರು ಬಿಡಿ ಎಂದು ಆ ಭಾಗದ ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ. ಆದಕಾರಣ, ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲು ಸದನವನ್ನು ಅಂಗೀಕಾರ ಪಡೆಯುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಎರಡನೇ ಅಂಶವು ಕಾವೇರಿ ನಿರ್ವಹಣಾ ಮಂಡಳಿಯ ರಚನೆ. ಕಾವೇರಿ ಜಲ ವಿವಾದ ಕುರಿತಂತೆ 2007 ರ ಫೆಬ್ರವರಿ 5 ರಂದು ಕಾವೇರಿ ನ್ಯಾಯಾಧಿಕರಣವು ನೀಡಿರುವ ಐ-ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿರುವ ವಿಶೇಷ ಮೇಲ್ಮನವಿಯು ಸರ್ವೊಚ್ಛ ನ್ಯಾಯಾಲಯದ ತ್ರಿ-ಸದಸ್ಯ ಪೀಠದ ಸಮ್ಮುಖದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಮೂಲ ಅರ್ಜಿಯ ವಿಚಾರಣೆಯು ಅಕ್ಟೋಬರ್ 18 ರಂದು ನಿಗದಿಯಾಗಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೆ ಆದೇಶಿಸಲು ದ್ವಿ-ಸದಸ್ಯ ಪೀಠಕ್ಕೆ ವ್ಯಾಪ್ತಿಯೇ ಇಲ್ಲ.

ಅಲ್ಲದೆ, ಕರ್ನಾಟಕ ಮತ್ತು ತಮಿಳು ನಾಡು ರಾಜ್ಯಗಳು ಮಾತ್ರವಲ್ಲದೆ, ಕಾವೇರಿ ಕೊಳ್ಳದ ಇತರೆ ಎರಡು ಪಾಲುದಾರ ರಾಜ್ಯಗಳಾದ ಕೇರಳ ಹಾಗೂ ಪುದುಚೇರಿ ರಾಜ್ಯಗಳಿಗೆ ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಲು ಯಾವುದೇ ಅವಕಾಶ ನೀಡದೆಯೇ ಕಾವೇರಿ ನಿರ್ವಹಣಾ ಮಂಡಳಿಯನ್ನು ನಾಲ್ಕು ದಿನಗಳೊಳಗೆ ಅಂದರೆ ಅಕ್ಟೋಬರ್ 4 ರೊಳಗೆ ರಚಿಸುವಂತೆ ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಕ್ರಮವು ನ್ಯಾಯ ಸಮ್ಮತವಲ್ಲ.

ಜೊತೆಗೆ, 1956 ರ ಅಂತಾರಾಜ್ಯ ಜಲ ವಿವಾದ ಕಾಯಿದೆಯ ಪರಿಚ್ಛೇಧ 6 (ಎ) ಉಪ ವಾಕ್ಯ 7 ರಂತೆ ಸಂಸತ್ತಿನ ಅನುಮೋದನೆ ಹಾಗೂ ಅಂಗೀಕಾರ ಪಡೆದ ನಂತರವೇ ಕಾವೇರಿ ನಿರ್ವಹಣಾ ಮಂಡಳಿಯ ರಚನೆ ಸಾಧ್ಯ ಎಂದು ಸರ್ವ ಪಕ್ಷಗಳ ಸಭೆಯಲ್ಲಿ ಹೊರಹೊಮ್ಮಿದ ಸಲಹೆಗೆ ರಾಜ್ಯ ಮಂತ್ರಿ ಪರಿಷತ್ ಸಭೆ ಮನ್ನಣೆ ನೀಡಿದೆ. ನ್ಯಾಯಾಲಯದ ಈ ದೋಷಪೂರಿತ ಆದೇಶದಲ್ಲಿನ ಲೋಪಗಳನ್ನು ಉಲ್ಲೇಖಿಸಿ ಸೋಮವಾರ ಮತ್ತೊಂದು ಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಕೇಂದ್ರ ಜಲ ಸಂಪನ್ಮೂಲ ಸಚಿವ ಉಮಾ ಭಾರತಿ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 29 ರಂದು ನಡೆದ ಉಭಯ ರಾಜ್ಯಗಳ ಮುಖ್ಯ ಕಾರ್ಯ ನಿರ್ವಾಹಕರ ಸಭೆಯಲ್ಲಿ ಜಲಾಶಯಗಳಲ್ಲಿನ ಒಳ ಹರಿವು ಹಾಗೂ ಹೊರ ಹರಿವು ಒಳಗೊಂಡಂತೆ ಪ್ರಸ್ತುತ ಲಭ್ಯವಿರುವ ನೀರು ಸಂಗ್ರಹಣೆ ಕುರಿತ ಅಂಕಿ-ಅಂಶಗಳು ಹಾಗೂ ಬೆಳೆ ಪರಿಸ್ಥಿತಿಗಳ ವಾಸ್ತವಾಂಶಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಎರಡೂ ರಾಜ್ಯಗಳಿಗೆ ತಜ್ಞರ ತಂಡವನ್ನು ಕಳುಹಿಸಲು ಮಾಡಿದ ಮನವಿಯ ಬಗ್ಗೆ ನ್ಯಾಯಾಲಯವು ಪ್ರಸ್ತಾಪ ಮಾಡಲೇ ಇಲ್ಲ. ಆದರೆ, ಉಭಯ ರಾಜ್ಯಗಳೂ ಯಾವುದೇ ಮನವಿ ಮಾಡದೇ ಇದ್ದರೂ, ಅಥವಾ ಪ್ರಾರ್ಥನೆ ಸಲ್ಲಿಸದದೇ ಇದ್ದರೂ, ಕಾವೇರಿ ನಿರ್ವಹಣಾ ಮಂಡಳಿಯ ರಚನೆ ಕುರಿತಂತೆ ಆದೇಶ ಹೊರಡಿಸಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದರು.

ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೆ ರಾಜ್ಯ ಸರ್ಕಾರದ ಪ್ರತಿನಿಧಿಯೋರ್ವರನ್ನು ನಾಮ ನಿರ್ದೇಶನ ಮಾಡುವಂತೆ ಸೂಚಿಸಿರುವುದು ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಮೂರನೇ ಅಂಶವಾಗಿದೆ. ಆದರೆ, ಕಾವೇರಿ ನಿರ್ವಹಣಾ ಮಂಡಳಿಯ ರಚನೆಯೇ ಸಾಧುವಲ್ಲ ಎಂಬುದು ಸುಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯನ್ನು ನಾಮ ನಿರ್ದೇಶನ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಸಿದ್ಧರಾಮಯ್ಯ ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited