ಬೆಂಗಳೂರು : ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನ ಸೋಮವಾರದಿಂದ ಬೆಂಗಳೂರಿಗೆ ಸ್ಥಳಾಂತರವಾಗಲಿದೆ. ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಮುಂದಿನ ಹತ್ತು ದಿನಗಳ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಸೋಮವಾರ 11 ಗಂಟೆಯಿಂದ ನಡೆಯುವ ಅಧಿವೇಶನದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಬಗ್ಗೆ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಶುಕ್ರವಾರ ತಿಳಿಸಿದ್ದರು.ಇದರೊಂದಿಗೆ ರೈತರ ಸರಣಿ ಆತ್ಮಹತ್ಯೆ, ಲೋಕಾಯುಕ್ತ ಕಾಯ್ದೆಗೆ ಸಮಗ್ರ ತಿದ್ದುಪಡಿ ವಿಧೇಯಕ ಮಂಡನೆ ಸೇರಿದಂತೆ ಹಲವು ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾಗಲಿದೆ.2015-16ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ಗೆ ಸರ್ಕಾರ ಸದನದ ಅನುಮೋದನೆ ಪಡೆಯಲಿದೆ. ಹೈದರಾಬಾದ್- ಕರ್ನಾಟಕ ವಿಶೇಷ ಸ್ಥಾನಮಾನ ಹಾಗೂ ಡಿ.ಎಂ. ನಂಜುಂಡಪ್ಪ ವರದಿ ಕುರಿತು ಬೆಳಗಾವಿ ಅಧಿವೇಶನದಲ್ಲಿ ನಡೆದ ಚರ್ಚೆಗೆ ಸರ್ಕಾರ ಉತ್ತರ ನೀಡಲಿದೆ.
ಈ ನಡುವೆ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷ ಜೆಡಿಎಸ್ ಮುಂದಾಗಿದೆ. ಆದರೆ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ಇರುವುದರಿಂದ ಇದರಿಂದ ವ್ಯತ್ಯಾಸವೇನು ಆಗುವುದಿಲ್ಲ.ಆದರೆ, ಈ ಅವಿಶ್ವಾಸ ನಿರ್ಣಯಕ್ಕೆ ಬೆಂಬಲಿಸದಿರುವ ಬಗ್ಗೆ ಬಿಜೆಪಿ ನಾಯಕರು ಈಗಾಗಲೇ ತಾತ್ವಿಕ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ. ಆದರೂ ಸೋಮವಾರ ಬೆಳಗ್ಗೆ ಅಧಿವೇಶನ ಪ್ರಾರಂಭವಾಗುವ ಮೊದಲು ಪಕ್ಷದ ನಾಯಕರುಸಭೆ ಸೇರಿ ಚರ್ಚೆ ನಡೆಸಿ ತಮ್ಮ ನಿಲುವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದು ಸರ್ಕಾರವನ್ನು ಉರುಳಿಸುವ ಉದ್ದೇಶದಿಂದಲ್ಲ, ಕಳೆದೆರಡು ವರ್ಷಗಳಲ್ಲಿ ಸರ್ಕಾರ ಕೈಗೊಂಡ ಕಾರ್ಯಕ್ರಮಗಳು, ಅದರ ನಡವಳಿಕೆಗಳು, ಜನವಿರೋಧಿ ನೀತಿಗಳ ಬಗ್ಗೆ ಚರ್ಚಿಸಲು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು. ಈ ಸಂಬಂಧ ಸೋಮವಾರ ಬೆಳಿಗ್ಗೆ, ಜೆಡಿಎಸ್ ಶಾಸಕಾಂಗ ಪಕ್ಷದ ಸಭೆದ ಸಭೆಯಲ್ಲಿ ಪಕ್ಷದ ಶಾಸಕರ ಅಭಿಪ್ರಾಯ ಪಡೆಯಲಾಗುವುದು ಹೇಳಿದ್ದಾರೆ.