Untitled Document
Sign Up | Login    
Dynamic website and Portals
  
December 9, 2014

ಬೆಳಗಾವಿಯಲ್ಲಿ ಇಂದಿನಿಂದ ವಿಧಾನಮಂಡಲ ಅಧಿವೇಶನ

ಬೆಳಗಾವಿ : ಬೆಳಗಾವಿಯಲ್ಲಿ ಡಿ.9ರಿಂದ ಆರಂಭಗೊಳ್ಳಲಿರುವ ವಿಧಾನಮಂಡಲಚಳಿಗಾಲದ ಅಧಿವೇಶನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಮರಾಂಗಣವಾಗಿ ಪರಿಣಮಿಸಲಿದೆ.

ಈ ಬಾರಿಯ ವಿಧಾನಮಂಡಲ ಅಧಿವೇಶನ ಪರಸ್ಪರ ಕೆಸರೆರಚಾಟದ ರಾಜಕೀಯ ಮಹಾಮೇಳಾವ ಆಗುವ ಎಲ್ಲ ಲಕ್ಷಣ ಗೋಚರಿಸಿದೆ.

ಕಾಂಗ್ರೆಸ್‌ ಸರಕಾರದ ವೈಫಲ್ಯಗಳನ್ನು ಎತ್ತಿತೋರಿಸಿ ತೀವ್ರ ಮುಖಭಂಗ ಉಂಟು ಮಾಡಲು ಸದನದ ಹೊರಗೆ ಮತ್ತು ಒಳಗೆ ಸರ್ವ ಸನ್ನದ್ಧವಾಗಿರುವ ಬಿಜೆಪಿಯ ಆಕ್ರಮಣಕ್ಕೆ ಕಾಂಗ್ರೆಸ್‌ ರಕ್ಷಣಾತ್ಮಕ ನಿಲುವು ತಾಳುವುದೇ ಅಥವಾ ಆಕ್ರಮಣವೇ ಅತ್ಯುತ್ತಮ ರಕ್ಷಣಾತಂತ್ರ ಎಂಬ ನೀತಿಗೆ ಶರಣಾಗುವುದೇ ಎಂಬುದನ್ನು ಕಾದುನೋಡಬೇಕಿದೆ.

ಪ್ರಮುಖ ವಿಪಕ್ಷ ಬಿಜೆಪಿಯಂತೂ ತನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾಂಗ್ರೆಸ್‌ ಮೇಲೆ ದಾಳಿಗೆ ಸಜ್ಜಾಗಿದೆ. ಆ ಪಕ್ಷದ ನಾಯಕರು ಮಂಗಳವಾರ ಸಂಘಟಿಸಿರುವ ಸುವರ್ಣಸೌಧ ಮುತ್ತಿಗೆಗೆ ಬಡಿಗೆ ಹಿಡಿದು ಕೊಂಡು ಬನ್ನಿ ಎಂದು ಕಾರ್ಯಕರ್ತರಿಗೆ ಹಾಗೂ ರೈತರಿಗೆ ರಣವೀಳ್ಯ ನೀಡಿ ತಮ್ಮ ಉದ್ದೇಶ ಸ್ಪಷ್ಟ ಪಡಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿನ ವೈಫ‌ಲ್ಯ, ಹದಗೆಟ್ಟು ಹೋಗಿರುವ ಕಾನೂನು ಸುವ್ಯವಸ್ಥೆ, ಶಾಲಾ ಮಕ್ಕಳ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟು ವಲ್ಲಿ ಸರಕಾರದ ವೈಫ‌ಲ್ಯ ಹಾಗೂ ಕಳಂಕಿತ ಪಟ್ಟಿಯಲ್ಲಿರುವ ಪಂಚ ಸಚಿವರ ರಾಜೀನಾಮೆ ಪಡೆಯುವುದು ಬಿಜೆಪಿಹೋರಾಟದ ಗುರಿ.

ಇದಕ್ಕಾಗಿ ಸಾವಿರಾರು ಮಂದಿಯೊಂದಿಗೆ ಸುವರ್ಣ ಸೌಧಕ್ಕೆ ಮುತ್ತಿಗೆಯನ್ನು ಆಯೋಜಿ ಸಿದೆ. ಇದನ್ನು ತಡೆಗಟ್ಟಲು ಪೊಲೀಸ್‌ ವ್ಯವಸ್ಥೆ ಕೂಡ ಸರ್ವ ಸನ್ನದ್ಧವಾಗಿದೆ. ಈ ಸಂಘರ್ಷ ಹಿಂಸಾರೂಪ ಪಡೆದರೆ ಪರಿಣಾಮ ನೇರವಾಗಿ ಅಧಿವೇಶನದ ಮೇಲೆ ಆಗುವ ಸಾಧ್ಯತೆಯಿದೆ. ಇಲ್ಲಿ ಕಾಂಗ್ರೆಸ್‌ಗೆ ಇರುವ ಸಮಾಧಾನಕರ ಅಂಶವೆಂದರೆ ಜೆಡಿಎಸ್‌ ಸುಗಮ ಕಲಾಪದ ಪರವಿರುವುದು.

ಸದನದ ಹೊರಗೆ ಏನೇ ನಡೆದರೂ ಕಲಾಪ ಬಲಿಯಾಗದಂತೆ ತಡೆಯಲು ಜೆಡಿಎಸ್‌ನ ನಿಲುವು ಕಾಂಗ್ರೆಸ್‌ಗೆ ವರವಾಗಿದೆ. ಇದನ್ನು ಬಳಸಿಕೊಂಡು ಉತ್ತರ ಕರ್ನಾಟಕದ ಆಶೋತ್ತರಗಳ ಈಡೇರಿಕೆಗೆ ಕಲಾಪ ನಡೆಸಲು ಬಿಜೆಪಿಯೇ ಅಡ್ಡಿ ಎಂದು ಬಿಂಬಿಸುವ ಗುರಾಣಿಯನ್ನು ಕಾಂಗ್ರೆಸ್‌ ಬಳಸುವುದು ಸಹಜ. ಹೀಗಾಗಿ ಬಿಜೆಪಿ ಸದನದ ಒಳಗೆ ಹೇಗೆ ತನ್ನ ಹೋರಾಟವನ್ನು ಮುಂದುವರಿಸುತ್ತದೆ ಎಂಬುದು ಕುತೂಹಲಕರ.

ಕಾಂಗ್ರೆಸ್‌ಗೆ ಈ ಬಾರಿಯ ಅಧಿವೇಶನ ಸತ್ವ ಪರೀಕ್ಷೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕಳೆದ ಬಾರಿಯ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸರಕಾರ ಇನ್ನೂ ಹನಿಮೂನ್‌ ಅವಧಿಯಲ್ಲಿ ಇತ್ತು. ಹಾಗಿದ್ದರೂ, ಆಗ ಶಾಸಕರಾಗಿದ್ದ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾದಿಭಾಗ್ಯ ಯೋಜನೆ ವಿರೋಧಿಸಿ ಭಾರೀ ಗದ್ದಲ ಎಬ್ಬಿಸಿ ಮೂರು ದಿನ ಸದನ ಕಲಾಪಕ್ಕೆ ಅಡ್ಡಿಪಡಿಸಿತ್ತು. ಅನಂತರ ಕಬ್ಬು ಬೆಳೆಗಾರರ ಹೋರಾಟ ವಿಕೋಪಕ್ಕೆ ತಿರುಗಿ ಬೆಳೆಗಾರ ವಿಟಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡಿದ್ದು ಇಡೀ ಸದನದ ದಿಕ್ಕನ್ನೇ ಬದಲಿಸಿತ್ತು.

ಕಾನೂನು ಸುವ್ಯವಸ್ಥೆ ಅದರಲ್ಲೂ ಶಾಲಾ ಮಕ್ಕಳ ಮೇಲೆ ಸತತವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಗಟ್ಟುವಲ್ಲಿನ ಲೋಪವನ್ನು ಸಮರ್ಥಿಸಿಕೊಳ್ಳುವುದು ಕಷ್ಟ.

ಜತೆಗೆ, ಕಾಂಗ್ರೆಸ್‌ನ ಸಚಿವರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆ ಪಕ್ಷದ ಶಾಸಕರೇ ದೂರುತ್ತಾರೆ. ಐವರು ಸಚಿವರು ಭೂ ಹಗರಣ ಸೇರಿದಂತೆ ಹಲವು ಆರೋಪಗಳಿಗೆ ತುತ್ತಾಗಿದ್ದಾರೆ. ಇದೆಲ್ಲದರ ಜತೆಗೆ ಬೆಳಗಾವಿ ಅಧಿವೇಶನ ಎಂದ ಕೂಡಲೇ ರಾಜಕೀಯ ಪಕ್ಷಗಳು ಮಾತ್ರವಲ್ಲದೆ ವಿವಿಧ ಸಂಘಟನೆಗಳು ಹೋರಾಟ ಹಾಗೂ ಪ್ರತಿಭಟನೆಗಳಿಗೆ ಇಳಿಯುವುದು ಕಾಂಗ್ರೆಸ್‌ಗೆ ನುಂಗಲಾಗದ ತುಪ್ಪ.

ಈ ಬಾರಿ ಕಬ್ಬು ಬೆಳೆಗಾರರ ಎರಡು ರೈತ ಗುಂಪುಗಳು ಪ್ರತಿಭಟನೆಗೆ ಇಳಿಯಲಿವೆ. ಈ ಭಾಗದ ವಕೀಲರು ಬೆಳಗಾವಿಯಲ್ಲಿ ಕೆಎಟಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಹಲವು ಸಂಘಟನೆಗಳು ಹೋರಾಟದ ಹಾದಿ ಹಿಡಿದಿವೆ.

ಈ ಕಾರಣಗಳಿಂದ ಕಾಂಗ್ರೆಸ್‌ಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಆಸಕ್ತಿಯೇ ಇರಲಿಲ್ಲ. ಈ ಬಾರಿ ಬೆಳಗಾವಿ ಅಧಿವೇಶನವನ್ನು ನಡೆಸದಿರುವ ಉದ್ದೇಶವೂ ಇತ್ತು. ಆದರೆ, ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರ ಹಠಕ್ಕೆ ಬಲಿಬಿದ್ದು ಅತ್ಯಂತ ಕಡಿಮೆ ಅವಧಿಯ ಅರ್ಥಾತ್‌ 10 ದಿನಗಳ (ಸ್ಪೀಕರ್‌ ಅವರಿಗೆ ಒಂದು ತಿಂಗಳು ಸದನ ನಡೆಸುವ ಉದ್ದೇಶವಿತ್ತು) ಅಧಿವೇಶನ ಕಾಟಾಚಾರಕ್ಕೆ ಎಂಬಂತೆ ನಡೆಸಲು ಮುಂದಾಗಿದೆ.

ಈ ಅಧಿವೇಶನದಲ್ಲಿ ಹೇಳಿಕೊಳ್ಳುವಂತಹ ಪ್ರಮುಖ ಮಸೂದೆಗಳನ್ನು ಸರಕಾರ ಮಂಡಿ ಸುವ ಉದ್ದೇಶ ಹೊಂದಿಲ್ಲ. ಕರ್ನಾಟಕ ಕಾಕಂಬಿ ನಿಯಂತ್ರಣ ಮಸೂದೆ, ಪುರಸಭೆಗಳ ಮತ್ತು ಇತರ ಕಾನೂನು ಮಸೂದೆಯತಂಹ ಕೆಲವೇ ಕೆಲವು ಮಸೂದೆಗಳು ಅಜೆಂಡಾದಲ್ಲಿ ಇವೆ.

ಇದಲ್ಲದೆ, ಅಬಕಾರಿ ತಿದ್ದುಪಡಿ ಮಸೂದೆ ಮತ್ತು ಜಾನುವಾರು ಪ್ರತಿಬಂಧಕ ಮಸೂದೆ ಯನ್ನು ಹಿಂಪಡೆಯುವ ಉದ್ದೇಶವನ್ನು ಸರಕಾರ ಹೊಂದಿರುವುದು ಸದನದಲ್ಲಿ ತೀವ್ರ ಚರ್ಚೆಗೆ ಕಾರಣವಾಗಬಹುದು.

ಈ ನಡುವೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಬೆಳಗಾವಿ ಅಧಿವೇಶನ ಅಖಾಡವಾಗಬೇಕು ಎಂಬ ಮೂಲ ಆಶಯ ಕಾಂಗ್ರೆಸ್‌ಗೆ ಈ ಬಾರಿ ಬಿಜೆಪಿಯ ದಾಳಿ ಹಿಮ್ಮೆ ಟ್ಟಿಸಲು ಗುರಾಣಿಯಾಗುವ ಸಾಧ್ಯತೆಯಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited