ಲಖ್ನೌ : ಹುಡುಗಿಯರು ಜೀನ್ಸ್ ಹಾಗೂ ಮೊಬೈಲ್ ಬಳಸುವುದಕ್ಕೆ ನಿಷೇಧ ಹೇರಿದ್ದ ಜಾಟ್ ಜನಾಂಗದ ಖಾಪ್ ಪಂಚಾಯಿತಿ, ಈಗ ಸಾಮಾಜಿಕ ಜಾಲತಾಣಗಳಿಂದಲೂ ದೂರವಿರುವಂತೆ ಮಹಿಳೆಯರು/ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದೆ.
ಮುಜಾಫರ್ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಜಾಟ್ ಸಮುದಾಯದವರು ತಮ್ಮ ಹೆಣ್ಣುಮಕ್ಕಳು ಪ್ರೀತಿಸಿ ಮದುವೆಯಾಗುವ ಪ್ರಕರಣಗಳನ್ನು ತಡೆಗಟ್ಟಲು ಈ ಕ್ರಮ ಕೈಗೊಂಡಿದ್ದಾರೆ. ಮುಜಾಫರ್ ನಗರದಲ್ಲಿ ನಡೆದ ಜಾಟ್ ನಾಯಕ ಚೌದರಿ ಕಾಬುಲ್ ಸಿಂಗ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಸಭೆಯಲ್ಲಿ ಪಂಚಾಯಿತಿ ಪ್ರಮುಖರು ಈ ನಿರ್ಧಾರ ಕೈಗೊಂಡಿದ್ದು, ಪ್ರೇಮ ವಿವಾಹವನ್ನು ನಿಷೇಧಿಸಿದ್ದಾರೆ.
ಈ ಹಿಂದೆ ಇದೇ ಪಂಚಾಯಿತಿ ಪ್ರಮುಖರು ಹೆಣ್ಣುಮಕ್ಕಳು ಜೀನ್ಸ್ ಹಾಗೂ ಮೊಬೈಲ್ ಬಳಸುವುದನ್ನು ನಿಷೇಧಿಸಿ ಅದೇಶ ಹೊರಡಿಸಿದ್ದರು. ಆದೇಶ ಮೀರಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಸಾಮಾಜಿಕ ಜಾಲತಾಣ ಫೇಸ್ ಬುಕ್, ಟ್ವಿಟರ್ ನಿಂದಲೂ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೇ ಪ್ರೇಮ ವಿವಾಹವಾಗದಂತೆ ಪೋಷಕರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಬೇಕೆಂಬ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಹುಡುಗಿಯರು ಜೀನ್ಸ್ ಧರಿಸಬಾರದು ಎಂದು ಉತ್ತರ ಪ್ರದೇಶದಲ್ಲಿ ನಡೆದ ಮಹಾಪಂಚಾಯತ್ ಆದೇಶ ನೀಡಿತ್ತು.