Untitled Document
Sign Up | Login    
Dynamic website and Portals
  
November 19, 2014

ಆಸ್ಟ್ರೇಲಿಯಾ ಜತೆ 5 ಒಪ್ಪಂದಕ್ಕೆ ಸಹಿ: ಫಿಜಿಗೆ ತೆರಳಿದ ಪ್ರಧಾನಿ ಮೋದಿ

ಆಸ್ಟ್ರೇಲಿಯಾ ಜತೆ 5 ಒಪ್ಪಂದಕ್ಕೆ ಸಹಿ ಆಸ್ಟ್ರೇಲಿಯಾ ಜತೆ 5 ಒಪ್ಪಂದಕ್ಕೆ ಸಹಿ

ಕ್ಯಾನ್ ಬೆರಾ : 28 ವರ್ಷಗಳ ಬಳಿಕ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಮೊದಲ ಭಾರತೀಯ ಪ್ರಧಾನಿ ಎಂಬ ದಾಖಲೆ ಬರೆದಿದ್ದ ನರೇಂದ್ರ ಮೋದಿ, ಮತ್ತೂಂದು ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ರೀತಿ ಮಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಅಮೆರಿಕ ಸಂಸತ್ತಿನಲ್ಲಿ, ಅದಕ್ಕೂ ಹಿಂದೆ ಭೂತಾನ್‌, ನೇಪಾಳ ಸಂಸತ್ತನಲ್ಲೂ ಮೋದಿ ಅವರು ಭಾಷಣ ಮಾಡಿದ್ದರು ಎಂಬುದು ಗಮನಾರ್ಹ.

ಈ ಮಧ್ಯೆ, ಮ್ಯಾನ್ಮಾರ್‌ ಭೇಟಿ ಮುಗಿಸಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಮೋದಿ ಈಗ ಅದನ್ನೂ ಮುಗಿಸಿದ್ದು, ಫಿಜಿ ದ್ವೀಪರಾಷ್ಟ್ರ ಪ್ರವಾಸ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್‌ ಅವರ ಜತೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಸಾಮಾಜಿಕ ಭದ್ರತೆ, ಶಿಕ್ಷೆಗೆ ಒಳಗಾದ ಕೈದಿಗಳ ಹಸ್ತಾಂತರ, ಮಾದಕ ವಸ್ತು ವ್ಯಾಪಾರ ನಿರ್ಬಂಧ ಪ್ರವಾಸೋದ್ಯಮ, ಕಲೆ, ಸಂಸ್ಕೃತಿಗೆ ಸಂಬಂಧಿಸಿದ 5 ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಭಾರತಕ್ಕೆ ಯುರೇನಿಯಂ ಪೂರೈಸುವುದಾಗಿ ಅಬೋಟ್‌ ಅವರು ಈ ವೇಳೆ ಭರವಸೆ ನೀಡಿದರು. ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಆದಷ್ಟು ಬೇಗ ಸಹಿ ಹಾಕಲು ನಿರ್ಧರಿಸಲಾಯಿತು.

ಭಾರತದೊಂದಿಗೆ ಆಸ್ಟ್ರೇಲಿಯಾ ಸಹಜವಾದ ಸ್ನೇಹವನ್ನು ಹೊಂದಿದ್ದು, ಭದ್ರತೆ ಮತ್ತು ರಕ್ಷಣೆ ಎರಡೂ ದೇಶಗಳ ಸ್ನೇಹದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಜಂಟಿ ಸುದ್ದಿಗೋಷ್ಠಿಯ ವೇಳೆ ಮೋದಿ ಬಣ್ಣಿಸಿದರು.

ಮಾತುಕತೆಯ ವೇಳೆ ನಾಗರಿಕ ಅಣು ಒಪ್ಪಂದದ ಕುರಿತಂತೆ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಎರಡು ತಿಂಗಳ ಹಿಂದೆ ಭಾರತಕ್ಕೆ ಚೊಚ್ಚಲ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬೋಟ್‌, ಭಾರತಕ್ಕೆ ಯುರೇನಿಯಂ ಪೂರೈಸುವ ಕುರಿತು ಪ್ರಧಾನಿ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದ್ದರು. ಆಸ್ಟ್ರೇಲಿಯಾ ವಿಶ್ವದ ಶೇ. 40ರಷ್ಟು ಯುರೇನಿಯಂ ನಿಕ್ಷೇಪವನ್ನು ಹೊಂದಿದ್ದು, 7,000 ಟನ್‌ಗಳಷ್ಟು ಯುರೇನಿಯಂ ಅನ್ನು ರಫ್ತು ಮಾಡುತ್ತಿದೆ.

ದ್ವಿಪಕ್ಷೀಯ ಮಾತುಕತೆ ಬಳಿಕ ಆಸ್ಟ್ರೇಲಿಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರತಿಯೊಂದು ದೇಶಗಳಿಗೆ ಮಾರಕವಾಗಿರುವ ಭಯೋತ್ಪಾದನೆಯನ್ನು ಮಟ್ಟಹಾಕಲು ಜಾಗತಿಕ ಕಾರ್ಯತಂತ್ರವೊಂದನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು. ಅಲ್ಲದೆ ಎರಡು ದೇಶಗಳ ದ್ವಿಪಕ್ಷೀಯ ಸಂಬಂಧಗಳು ಇನ್ನಷ್ಟು ಬಲಗೊಳ್ಳುವ ಅಗತ್ಯವಿದೆ ಎಂದು ಕರೆ ನೀಡಿದರು.

ಭಾರತ 2015ರಲ್ಲಿ 'ಮೇಕ್‌ ಇನ್‌ ಇಂಡಿಯಾ' ಶೋವನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸಲಿದೆ. ಆಸ್ಟ್ರೇಲಿಯಾ ಮುಂದಿನ ವರ್ಷದ ಜನವರಿಯಲ್ಲಿ ಭಾರತದಲ್ಲಿ 'ವ್ಯಾಪಾರ ಸಪ್ತಾಹ'ವೊಂದನ್ನು ಆಯೋಜಿಸಲಿದೆ ಎಂದು ಹೇಳಿದರು.

ಇದೇವೇಳೆ ಸಂಸತ್ತಿನಲ್ಲಿ ಮಾತನಾಡಿದ ಟೋನಿ ಅಬೋಟ್‌, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ವೇಳೆಗೆ ಆಸ್ಟ್ರೇಲಿಯ ಯುರೇನಿಯಂ ಪೂರೈಸಲಿದೆ ಎಂದು ಭರವಸೆ ನೀಡಿದರು. ಅಲ್ಲದೆ, ಎರಡು ದೇಶಗಳ ನಡುವೆ ಮುಂದಿನ ವರ್ಷದ ವೇಳೆಗೆ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬರಲಿದೆ ಎಂದು ಹೇಳಿದರು.

ಚೀನಾದೊಂದಿಗಿನ 900 ಲಕ್ಷ ಕೋಟಿ ರೂ. ವ್ಯಾಪಾರಕ್ಕೆ ಹೋಲಿಸಿದರೆ, ಭಾರತದೊಂದಿಗೆ ಕೇವಲ 9 ಲಕ್ಷ ಕೋಟಿ ರೂ. ವ್ಯಾಪಾರ ನಡೆಯುತ್ತಿದೆ ಇದನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಒತ್ತಿಹೇಳಿದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಉದ್ಯಮಿಗಳೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಿ, ಭಾರತದಲ್ಲಿ ಬಂಡವಾಳ ಹೂಡವಂತೆ ಕರೆ ನೀಡಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited