ಸಿಡ್ನಿ : ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಭಾಷಣದ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ, ಇಂದು ಸಿಡ್ನಿಯಲ್ಲಿ ಭಾಷಣ ಮಾಡಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಮೋದಿ, ಸಿಡ್ನಿಯಲ್ಲಿ ಭಾರತೀಯ ಸಮುದಾಯದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
28 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಮೋದಿ ಆಗಮನ ಇಲ್ಲಿನ ಅವರ ಅಭಿಮಾನಿಗಳ ಬಳಗದಲ್ಲಿ ಕುತೂಹಲ ಹೆಚ್ಚಿಸಿದೆ. ಆಸ್ಟ್ರೇಲಿಯಾದ ವಿವಿಧ ಭಾಗಗಳಲ್ಲಿ ಭಾರತೀಯ ಸಮುದಾಯದ ಸಾವಿರಾರು ಜನ ಸಿಡ್ನಿಯೆಡೆಗೆ ಮುಖ ಮಾಡಿದ್ದಾರೆ. ಹೀಗಾಗಿ ಸಿಡ್ನಿಯಲ್ಲೀಗ ಭಾರತೀಯ ಸಮುದಾಯದ ಜನರೀಗ ಅಕ್ಷರಶಃ ಮೋದಿ ಜ್ವರಕ್ಕೆ ಒಳಗಾಗಿದ್ದಾರೆ.
ಸಿಡ್ನಿಯಲ್ಲಿನ ಆಲೊನ್ಸ್ ಅರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ (ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ) ಪ್ರಧಾನಿ ಮೋದಿ, ಅಭಿಮಾನಿ ಬಳಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ಕ್ರೀಡಾಂಗಣದ ಒಳಗೆ 16000 ಜನಕ್ಕೆ ಅವಕಾಶವಿದ್ದರೆ, ಹೊರಗೆ ಬೃಹತ್ ಸ್ಕ್ರೀನ್ಗಳ ಮೂಲಕ ಉಳಿದ ಸಾವಿರಾರು ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಕಾರ್ಯಕ್ರಮವನ್ನು ಮೀರಿಸುವಂತೆ ಈ ಕಾರ್ಯಕ್ರಮವನ್ನು ಆಯೋಜಿಸಲು ಇಲ್ಲಿನ ಮೋದಿ ಅಭಿಮಾನಿಗಳು ಎಲ್ಲ ರೀತಿಯಲ್ಲೂ ಸಜ್ಜುಗೊಂಡಿದ್ದಾರೆ.
ಕಾರ್ಯಕ್ರಮ ಸ್ಥಳೀಯ ಮತ್ತು ವಿವಿಧ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ನೇರ ಪ್ರಸಾರಗೊಳ್ಳಲಿದ್ದು, 250 ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
ಸಮಾರಂಭ ಮುಗಿದ ಬಳಿಕ ಮೋದಿ ಕ್ಯಾನ್ಬೆರಾಕ್ಕೆ ಪ್ರಯಾಣ ಬೆಳೆಸಲಿದ್ದು, ಆ ಬಳಿಕ ಮೆಲ್ಬರ್ನ್ ಗೆ ತೆರಳಲಿದ್ದಾರೆ.
ಇದೇ ವೇಳೆ ಸಿಡ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ 220 ಪ್ರಯಾಣಿಕರನ್ನು ಹೊತ್ತ ಮೋದಿ ಎಕ್ಸ್ಪ್ರೆಸ್ ವಿಶೇಷ ರೈಲಿಗೆ ಭಾನುವಾರ ಚಾಲನೆ ನೀಡಲಾಗಿದೆ. ಮೋದಿ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಮೆಲ್ಬರ್ನ್ ಸಮೀಪದ ಸದರ್ನ್ ಕ್ರಾಸ್ ರೈಲ್ವೆ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಸಂಜೆ. 8 ಗಂಟೆಗೆ ಆಸ್ಟ್ರೇಲಿಯಾದ ಬಹು ಸಂಸ್ಕೃತಿ ಸಚಿವ ಮ್ಯಾಥು ಗೈ ಅವರು ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದರು.
ಮೆಲ್ಬರ್ನ್ ಇತಿಹಾಸದಲ್ಲಿ ಪ್ರಧಾನಿಯೊಬ್ಬರ ಹೆಸರಿನಲ್ಲಿ ರೈಲೊಂದನ್ನು ಬಿಡುತ್ತಿರುವುದು ಇದೇ ಮೊದಲು. ರೈಲಿನಲ್ಲಿ ಪ್ರಯಾಣಿಕರಿಗೆ ವಿಶೇಷ ಖಾದ್ಯಗಳು ದೊರೆಯಲಿದ್ದು, ಮೋದಿ ಡೋಕ್ಲಾಗಳನ್ನು ಆಯೋಜಕರು ಉಚಿತವಾಗಿ ಪೂರೈಸಿದ್ದಾರೆ. ಪಂಜಾಬಿ, ಮುಸ್ಲಿಂ, ಗುಜರಾತಿ ಮತ್ತು ಕಾಶ್ಮೀರಿ ಸೇರಿದಂತೆ ವಿವಿಧ ಸಮುದಾಯದ ಜನರು ನಾಲ್ಕು ಬೋಗಿಯುಳ್ಳ ರೈಲಿನಲ್ಲಿ ಸಿಡ್ನಿಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣಿಕರು ರೈಲನ್ನು ಏರುವುದಕ್ಕೂ ಮುನ್ನ ದೇಶಭಕ್ತಿ ಗೀತೆಗಳನ್ನು ಹಾಡಿ ಕುಣಿದು ಕುಪ್ಪಳಿಸಿದರು.