ಮೆಲ್ಬರ್ನ್ : ಭಾರತದ 125 ಕೋಟಿ ಜನರ ಪ್ರತಿನಿಧಿಯಾಗಿ ನಾನು ಆಸ್ಟ್ರೇಲಿಯಾಕ್ಕೆ ಆಗಮಿಸಿದ್ದೇನೆ. ಪ್ರಜಾಪ್ರಭುತ್ವವು ಉಭಯ ದೇಶಗಳನ್ನು ಬೆಸೆದಿದ್ದು, ಭಾರತದ ಅಭಿವೃದ್ಧಿಗೆ ಆಸ್ಟ್ರೇಲಿಯಾದ ಸಹಕಾರ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
10 ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಸಂಸತ್ಗೆ ಭೇಟಿ ನೀಡಿ ಭಾಷಣ ಮಾಡಿದ್ದಾರೆ. ಮೊದಲಿಗೆ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಜತೆ ಮಾತುಕತೆ ನಡೆಸಿದರು.
ಸಂಸತ್ಗೆ ಭೇಟಿ ನೀಡಿದ ಮೋದಿ ಅವರಿಗೆ ಟೋನಿ ಅಬೋಟ್ ಸ್ವಾಗತ ಕೋರಿ, ಮೊದಲನೇ ವಿಶ್ವಯುದ್ಧದ ಪ್ರತಿರೂಪದ ಕಾಣಿಕೆಯನ್ನು ನೀಡಿದ್ದಾರೆ. ಭಾರತದ ಪ್ರಧಾನಿಯೊಬ್ಬರು ಆಸ್ಟ್ರೇಲಿಯಾದ ಸಂಸತ್ನ್ನು ಉದ್ದೇಶಿಸಿ ಮಾತನಾಡಿದ್ದು ಇದೇ ಮೊದಲ ಬಾರಿಯಾಗಿದೆ. ಸಂಸತ್ನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಅಲ್ಲಿನ ಮೂಲ ನಿವಾಸಿಗಳಿಗೆ ನಮನ ಸಲ್ಲಿಸಿ ಮಾತು ಆರಂಭಿಸಿದರು.
ಉಗ್ರವಾದವನ್ನು ಹತ್ತಿಕ್ಕಲು ಜಗತ್ತಿನ ರಾಷ್ಟ್ರಗಳು ಒಗ್ಗೂಡಬೇಕು ಎಂದು ಕರೆ ನೀಡಿದ ಮೋದಿ, ಭಾರತದ ಪ್ರಧಾನಮಂತ್ರಿಯೊಬ್ಬರಿಗೆ ಇಲ್ಲಿಗೆ ಬರಲು 28 ವರ್ಷಗಳೇ ಬೇಕಾಯಿತು. ಅಂದರೆ ಇದೊಂದು ಬದಲಾವಣೆಯ ಪರ್ವ. ನಾವು ಭಾರತದಲ್ಲಿ ಉಗ್ರವಾದದ ಕರಾಳ ಮುಖವನ್ನು ಹತ್ತಿರದಿಂದ ನೋಡಿದ್ದೇವೆ ಎಂದರು.
ಉಗ್ರವಾದವು ಬೃಹತ್ ರೂಪ ತಾಳುತ್ತಿದ್ದು, ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಹೀಗಿರುವಾಗ ಉಗ್ರವಾದವನ್ನು ನಿಯಂತ್ರಿಸಲು ಎಲ್ಲರೂ ಒಂದಾಗಬೇಕಾಗಿದೆ ಎಂದು ಕರೆ ನೀಡಿದ್ದಾರೆ.