ಪಣಜಿ : ಗೊವಾದ ನೂತನ ಮುಖ್ಯಮಂತ್ರಿ ಆಯ್ಕೆಯಾಗಿದ್ದು, ಲಕ್ಷ್ಮಿಕಾಂತ್ ಪರ್ಸೇಕರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಸಿಎಂ ಆಯ್ಕೆ ಕುರಿತು ಪಣಜಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಲಕ್ಷ್ಮಿಕಾಂತ್ ಪರ್ಸೆಕರ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಸಧ್ಯ ಆರೋಗ್ಯ ಸಚಿವರಾಗಿರುವ ಪರ್ಸೇಕರ್ ಅವರು ಸಂಜೆ 4 ಗಂಟೆಗೆ ಗೊವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವಿಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮನೋಹರ್ ಪರಿಕ್ಕರ್ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತವಾದ ಹಿನ್ನಲೆಯಲ್ಲಿ, ಪರಿಕ್ಕರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಇಲ್ಲವಾದಲ್ಲಿ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು.
ಆದರೆ ಅಲ್ಪಸಂಖ್ಯಾತ ಕ್ಯಾಥೋಲಿಕ್ ಸಮುದಾಯದವರಿಗೆ ಸಿಎಂ ಸ್ಥಾನ ನೀಡುವುದು ಬೇಡವೆಂದು ಕೇಂದ್ರ ಬಿಜೆಪಿ ನಾಯಕರು ನಿರ್ಧರಿಸಿರುವುದರಿಂದ, ವರಿಷ್ಠರ ಸೂಚನೆ ಮೇರೆಗೆ ಆರ್.ಎಸ್.ಎಸ್ ಮೂಲದ ಲಕ್ಷ್ಮಿಕಾಂತ್ ಪರ್ಸೇಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಡಿಸೋಜಾ ಡಿಸಿಎಂ ಸ್ಥಾನದಲ್ಲಿಯೇ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ.