ಅಹಮದಾಬಾದ್ : ಆನಂದಿಬೆನ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಇಂದು ನೂತನ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ವೇಳೆ ಅಧಿಕೃತ ಘೋಷಣೆ ಹೊರಬೀಳಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈಗಾಗಲೇ ಗುಜರಾತ್ ಮುಖ್ಯಮಂತ್ರಿ ಆಯ್ಕೆ ಕುರಿತು ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ನೂತನ ಸಿಎಂ ಸ್ಥಾನಕ್ಕೆ ಆರೋಗ್ಯ ಸಚಿವ ನಿತಿನ್ ಪಟೇಲ್ ಹೆಸರು ಬಹುತೇಕ ಅಂತಿಮವಾಗಿದೆ ಎಂದು ತಿಳಿದುಬಂದಿದೆ.
ಪಟೇಲ್ ಸಮುದಾಯದ ನಿತಿನ್ ಪಟೇಲ್ ಮತ್ತು ಗುಜರಾತ್ ಬಿಜೆಪಿ ಅಧ್ಯಕ್ಷ ವಿಜಯ್ ರೂಪಾನಿ ಹೆಸರುಗಳು ಸಿಎಂ ಹುದ್ದೆಗೆ ಕೇಳಿ ಬಂದಿದ್ದವು. ಆದರೆ ವಿಜಯ್ ರೂಪಾಣಿ, ಈಗಾಗಲೇ ಮುಖ್ಯಮಂತ್ರಿ ರೇಸ್ನಿಂದ ಹಿಂದೆ ಸರಿದಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾಗಿಯೇ ಮುಂದುವರಿಯಲು ಬಯಸಿರುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಿತಿನ್ ಪಟೇಲ್ ನೂತನ ಸಿಎಂ ಆಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಇಂದು ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವ ನಿತಿನ್ ಗಡ್ಕರಿ ಹಾಗೂ ಸರೋಜ್ ಪಾಂಡೆ ವೀಕ್ಷಕರಾಗಿ ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಅಧಿಕೃತ ಘೊಷಣೆ ಹೊರಬೀಳುವ ನಿರೀಕ್ಷೆಯಿದೆ.