ನವದೆಹಲಿ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಗ್ಗೆ ಕೇಂದ್ರ ಸಚಿವ ಕಲ್ ರಾಜ್ ಮಿಶ್ರಾ ಪ್ರತಿಕ್ರಿಯಿಸಿದ್ದು ಮಹಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ. ಆದರೂ ಶಿವಸೇನೆಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕಲ್ ರಾಜ್ ಮಿಶ್ರಾ ತಿಳಿಸಿದ್ದಾರೆ.
ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಎಲ್ಲಾ ಪಕ್ಷಗಳ ಕಣ್ಣನ್ನು ತೆರೆಸಲಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಲಿದೆ ಎಂದು ಕೇಂದ್ರ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ಶಿವಸೇನೆ ಮುಖಂಡ, ಕೇಂದ್ರ ಸಚಿವ ಅನಂತ್ ಗೀತೆ, ಸೀಟು ಹಂಚಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯವಿದ್ದರೂ ಶಿವಸೇನೆ ಎನ್.ಡಿ.ಎ ಮೈತ್ರಿ ಕೂಟ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.