ಲಖ್ನೌ : ಉಪಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಕ್ಕೆ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದೆ.
ನೋಯ್ಡಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಯೋಗಿ ಆದಿತ್ಯನಾಥ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಯೋಗ ನೊಟೀಸ್ ಜಾರಿ ಮಾಡಿದೆ. ಸೆ.10ರ ಸಂಜೆಯೊಳಗೆ ಉತ್ತರಿಸಲು ಸೂಚಿಸಿದೆ. ಪ್ರಚೋದನಕಾರಿ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ಕ್ರಮ ಏಕೆ ಜರುಗಿಸಬಾರದು ಎಂದು ಆಯೋಗ ಜಾರಿ ಮಾಡಿರುವ ನೊಟೀಸ್ ನಲ್ಲಿ ಪ್ರಶ್ನಿಸಿದೆ.
ಶ್ರೀರಾಮ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯ ಎಂದು ಯೋಗಿ ಆದಿತ್ಯನಾಥ್ ಅವರು ಭಾಷಣದಲ್ಲಿ ಹೇಳಿದ್ದರು. ಈ ಮೂಲಕ ಯೋಗಿ ಅದಿತ್ಯನಾಥ್ ಅವರು ಶ್ರೀರಾಮನ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(3) ರ ಪ್ರಕಾರ, ಧಾರ್ಮಿಕ ನೆಲೆಯಲ್ಲಿ ಮತ ಯಾಚಿಸುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ.
ಉತ್ತರ ಪ್ರದೇಶ ದೇವಾಲಯಗಳಲ್ಲಿ ಧ್ವನಿ ವರ್ಧಕಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಆದರೆ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಸುವುದಕ್ಕೆ ಅವಕಾಶ ನೀಡಲಾಗಿದೆ. ಹಿಂದೂಗಳನ್ನು ಹಿಂಸಿಸುತ್ತಿರುವವರಿಗೆ ತಕ್ಕ ಉತ್ತರ ನೀಡುವುದಾಗಿ ಭಾಷಣದ ವೇಳೆ ಯೋಗಿ ಆದಿತ್ಯನಾಥ್ ಹೇಳಿದ್ದರು.