ನವದೆಹಲಿ : ವಾರ್ಷಿಕ ಆದಾಯದ ಬಗ್ಗೆ ಲೆಕ್ಕಪತ್ರಗಳನ್ನು ಸಲ್ಲಿಸದ ಎನ್.ಜಿ.ಒ ಗಳಿಗೆ ಮತ್ತೊಂದು ಶಾಕ್ ಎದುರಾಗಿದ್ದು 9,000 ಎನ್.ಜಿ.ಒ ಗಳ ಪರವಾನಗಿ ರದ್ದುಗೊಂಡಿದೆ.
ತೆರಿಗೆ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ವಾರ್ಷಿಕ ಆದಾಯದ ಬಗ್ಗೆ ಮಾಹಿತಿಯನ್ನು ನೀಡದೇ ಇರುವ ಸುಮಾರು 10,343 ಎನ್.ಜಿ.ಒ ಗಳಿಗೆ ಹಲವು ಬಾರಿ ಗೃಹ ಇಲಾಖೆ ನೊಟೀಸ್ ಜಾರಿ ಮಾಡಿತ್ತು. ಈ ಪೈಕಿ ಕೇವಲ 229 ಎನ್.ಜಿ.ಒ ಗಳು ಮಾತ್ರವೇ ಲೆಕ್ಕಪತ್ರಗಳನ್ನು ಸಚಿವಾಲಯಕ್ಕೆ ನೀಡಿತ್ತು. ಉಳಿದ ಎನ್.ಜಿ.ಒ ಗಳು ಯವುದೇ ರೀತಿಯ ಮಾಹಿತಿ ನೀಡಿರಲಿಲ್ಲ.
ಸರ್ಕಾರದ ನೊಟೀಸ್ ಜಾರಿಯಾದರೂ ಆದಾಯ ಕಾಯ್ದೆಯನ್ನು ಪಾಲಿಸದ ಕಾರಣ ಎನ್.ಜಿ.ಒಗಳ ಪರವಾನಗಿ ರದ್ದುಗೊಂಡಿದೆ ಎಂದು ಸರ್ಕಾರ ತಾನು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಈ ಹಿಂದೆ, ಗ್ರೀನ್ ಪೀಸ್ ಎನ್.ಜಿ.ಒ ಪರವಾನಗಿ ರದ್ದುಗೊಳಿಸಿ ಬ್ಯಾಂಕ್ ಖಾತೆಯ ಬಗ್ಗೆ ನಿಗಾವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು.
ವಾರ್ಷಿಕ ಆದಾಯ, ವಿದೇಶಿ ದೇಣಿಗೆ ಬಗ್ಗೆ ಮಾಹಿತಿ ನೀಡದ ಆಂಧ್ರಪ್ರದೇಶದ ಎನ್.ಜಿ.ಒಗಳು ಹಾಗೂ ಕೆಲ ಸಂಘ-ಸಂಸ್ಥೆಗಳು ಕಳೆದ ತಿಂಗಳು ಪರವಾನಗಿಯನ್ನು ಕಳೆದುಕೊಂಡಿದ್ದವು. ಈ ಸಾಲಿಗೆ 9,000 ಎನ್.ಜಿ.ಒ ಗಳು ಹೊಸದಾಗಿ ಸೇರಿಕೊಂಡಿವೆ.