ಬೆಂಗಳೂರು : ಅರ್ಕಾವತಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಮುಂದಿನ ಹೋರಾಟಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಅರ್ಕಾವತಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಸುರೇಶ್ ಕುಮಾರ್ ನೇತೃತ್ವದ ಸಮಿತಿಯಿಂದ ಇನ್ನಷ್ಟು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಸಮರ್ಪಕ ಮಾಹಿತಿ ಸಂಗ್ರಹದ ಬಳಿಕ ಬಿಜೆಪಿ ಘಟಕಕ್ಕೆ ಸಮಿತಿ ವರದಿ ಸಲ್ಲಿಸಲಿದ್ದು, ಮತ್ತೊಮ್ಮೆ ಸಮಾಲೋಚನೆ ನಡೆಸಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಬಿಬಿಎಂಪಿ ನೂತನ ಮೇಯರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಪರೇಟರ್ ಗಳಿಂದ ಅಭಿಪ್ರಾಯ ಸಂಗ್ರಹ ನಡೆಸಲಾಗುತ್ತಿದೆ. ಮೇಯರ್ ಆಯ್ಕೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದರು.
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತ ಮಾಹಿತಿಗಾಗಿ ಬಿಜೆಪಿ ಹರಸಾಹಸ ಪಡುತ್ತಿದೆ ಎನ್ನಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡದಂತೆ ಮೌಖಿಕ ಆದೇಶ ಹಿನ್ನಲೆಯಲ್ಲಿ ಸುರೇಶ್ ಕುಮಾರ್ ನೇತೃತ್ವದ ಸಮಿತಿಗೆ ನಿರೀಕ್ಷಿತ ಮಟ್ಟದಲ್ಲಿ ದಾಖಲೆಗಳು ಲಭ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬಿಜೆಪಿ ಮಾಹಿತಿ ಮತ್ತು ಹಕ್ಕು ಮೊರೆ ಹೋಗಿದೆ. ಒಂದು ವಾರದಲ್ಲಿ ಆರ್.ಟಿ.ಐ ನಿಂದ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ, ಬಿಜೆಪಿ ಘಟಕಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.