ಟೋಕಿಯೋ : 'ಜಪಾನ್-ಭಾರತ'ದ ದ್ವಿಪಕ್ಷೀಯ ಸಂಬಂಧ ವಿಶ್ವದಲ್ಲೇ ಪ್ರಭಾವಶಾಲಿ ಸಂಬಂಧವಾಗಲಿದೆ ಎಂದು ಜಪಾನ್ ರಾಜಧಾನಿ ಟೋಕಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಪಾನ್ ಪ್ರವಾಸದಲ್ಲಿರುವ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದ್ದಾರೆ.
ಸ್ಮಾರ್ಟ್ ಸಿಟಿ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಬುಲೆಟ್ ಟ್ರೈನ್ ಆರಂಭಿಸಲು ಭಾರತದಲ್ಲಿ 2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಜಪಾನ್ ಸರ್ಕಾರ ನಿರ್ಧರಿಸಿದೆ. ದ್ವಿಪಕ್ಷೀಯ ಮಾತುಕತೆ ನಡೆದ ಬಳಿಕ ಜಪಾನ್ ಪ್ರಧಾನಿಯೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶಿಂಜೋ ಅಬೆ ಅವರೊಂದಿಗಿನ ಸ್ನೇಹ ತುಂಬಾ ಹಳೆಯದ್ದು, ಭಾರತ ವಿದೇಶಾಂಗ ನೀತಿಯಲ್ಲಿ ಜಪಾನ್ ಪಾತ್ರ ಬಹಳ ಮಹತ್ವ ಹೊಂದಿದೆ ಎಂದು ಹೇಳಿದ್ದಾರೆ. ಜಪಾನ್ ಜನತೆ ತಮಗೆ ನೀಡಿದ ಸ್ವಾಗತಕ್ಕೆ ಅಭಾರಿ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಅಧಿಕಾರಕ್ಕೆ ಬಂದ 100 ದಿನಗಳಲ್ಲೇ ಜಪಾನ್ ಗೆ ಭೇಟಿ ನೀಡಲು ಅವಕಾಶ ದೊರೆತಿರುವುದು ಸಂತಸದ ವಿಷಯ, ಭಾರತದ ಅಭಿವೃದ್ಧಿಯಲ್ಲಿ ಜಪಾನ್ ಪಾತ್ರ ಮಹತ್ವದ್ದಾಗಿದೆ. ನಾವು ವಿಶ್ವದಲ್ಲೇ ಪ್ರಭಾವಶಾಲಿ ಸಂಬಂಧ ನಿಭಾಯಿಸಲಿದ್ದೇವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಕಾತರನಾಗಿದ್ದೆ. ಮೋದಿ ನನ್ನ ಹಳೆಯ ಮಿತ್ರ, ಮೋದಿಯೊಂದಿಗಿನ ಮಾತುಕತೆಯಿಂದ ಜಪಾನ್-ಭಾರತ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ವೃದ್ಧಿಗೊಳ್ಳಲಿದೆ ಎಂದು ಶಿಂಜೋ ಅಬೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಆರ್ಥಿಕ ತಾಂತ್ರಿಕ ನೆರವು ನೀಡಲು ಜಪಾನ್ ಸದಾ ಸಿದ್ಧವಿರುವುದಾಗಿ ಶಿಂಜೋ ಅಬೆ ಘೋಷಿಸಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಗಂಗಾ ನದಿ ಶುದ್ಧೀಕರಣಕ್ಕೆ ನೆರವು ನೀಡುವುದು, ವ್ಯಾಪಾರ, ವಾಣಿಜ್ಯ, ಆರ್ಥಿಕತೆ, ಉದ್ಯಮ, ರಕ್ಷಣಾ ಕ್ಷೇತ್ರದಲ್ಲಿ ಕೊಡುಕೊಳ್ಳುವಿಕೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ಶಿಂಜೋ ಅಬೆ ತಿಳಿಸಿದ್ದಾರೆ.
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಜಪಾನ್ ಭೇಟಿ ಯಶ್ವಸ್ವಿಯಾಗಿದ್ದು, ಮೋದಿ ಭೇಟಿಗೆ ಐತಿಹಾಸಿಕ ಪ್ರತಿಕ್ರಿಯೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಜಪಾನ್- ಭಾರತದ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.