ಹಂಗ್ ಝೌ : ಪ್ರಧಾನಿ ನರೇಂದ್ರ ಮೋದಿ ಅವರು, ಬ್ರಿಟನ್ ನ ನೂತನ ಪ್ರಧಾನಿ ತೆರೆಸಾ ಮೆ ಅವರನ್ನು ಭೇಟಿ ಮಾಡಿ ಶುಭಕೋರಿದರು. ಯುರೋಪಿಯನ್ ಒಕ್ಕೂಟದಿಂದ ಹೊರಬಂದ ಇಂಗ್ಲೆಂಡ್ ಜೊತೆ ದ್ವಿಪಕ್ಷೀಯ ಸಂಬಂಧ ವಿಸ್ತರಣೆ ಕುರಿತು ಮಾತುಕತೆ ನಡೆಸಿದರು.
ಚೀನಾದ ಹಂಗ್ ಝೌ ನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಹೊರಗೆ ಪ್ರಧಾನಿ ಮೋದಿ-ಬ್ರಿಟನ್ ಪ್ರಧಾನಿ ತೆರೆಸಾ ಮೆ ಭೇಟಿಯಾಗಿ, ಯುರೋಪಿಯನ್ ಒಕ್ಕೂಟದಿಂದ ಹೊರಬರಲು ಇಂಗ್ಲೆಂಡ್ ಮತ ಚಲಾಯಿಸಿದ ನಂತರ ಅವಕಾಶಗಳ ಬಲವರ್ಧನೆ ಕುರಿತು ಚರ್ಚೆ ನಡೆಸಿದರು.
ಇಂಗ್ಲೆಂಡ್ ಜೊತೆಗೆ ಅವಕಾಶಗಳನ್ನು ಹೆಚ್ಚಿಸಿಕೊಳ್ಳುವ ಕುರಿತು ಚರ್ಚೆ ನಡೆಸಿದ್ದು, ಅಲ್ಲದೆ ದ್ವಿಪಕ್ಷೀಯ ಸಹಭಾಗಿತ್ವ ಕಾರ್ಯತಂತ್ರವನ್ನು ಬಲಪಡಿಸಲು ಭಾರತ ಬದ್ಧವಾಗಿದೆ ಎಂದು ಮೋದಿ ಪ್ರತಿಪಾದಿಸಿದರು.
ಪರಿಣಾಮಕಾರಿ ಆರ್ಥಿಕ ಆಡಳಿತ ನಡೆಸಲು ಭ್ರಷ್ಟಾಚಾರ ವಿರುದ್ಧ ಹೋರಾಡುವುದು, ಕಪ್ಪು ಹಣ ಮತ್ತು ತೆರಿಗೆ ವಂಚನೆಗೆ ಕಡಿವಾಣ ಹಾಕುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಈ ಕುರಿತುವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಸ್ಪಷ್ಟಪಡಿಸಿದ್ದಾರೆ.
ತೆರೆಸಾ ಮೆ ಬ್ರಿಟನ್ ನ ನೂತನ ಪ್ರಧಾನ ಮಂತ್ರಿಯಾಗಿ ಜುಲೈ 13ರಂದು ಅಧಿಕಾರ ಸ್ವೀಕರಿಸಿದ್ದರು. ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸಿದ ನಂತರ ಪ್ರಧಾನ ಮಂತ್ರಿ ಸ್ಥಾನಕ್ಕೆ ಡೇವಿಡ್ ಕ್ಯಾಮರನ್ ರಾಜೀನಾಮೆ ನೀಡಿದ ನಂತರ ತೆರೆಸಾ ಅಧಿಕಾರ ಸ್ವೀಕರಿಸಿದ್ದಾರೆ.