ನವದೆಹಲಿ : ದ್ವಿಪಕ್ಷೀಯ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು 6ದಿನಗಳ ಜಪಾನ್ ಪ್ರವಾಸಕ್ಕೆ ತೆರಳಿದ್ದಾರೆ. ಪ್ರಧಾನಿ ಮೋದಿ ಜಪಾನ್ ಭೇಟಿ ಜಾಗತಿಕ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಬೆಳಿಗ್ಗೆ 6ಗಂಟೆಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಮೋದಿ, ಜಪಾನಿನ ಕ್ಯೋಟೊ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಮೋದಿ ಬರಮಾಡಿಕೊಳ್ಳಲಿದ್ದಾರೆ.
ಪ್ರಧಾನಿ ಮೋದಿ ಜತೆ ಪ್ರಧಾನಿ ಕಾರ್ಯಾಲಯದ ಕೆಲ ಅಧಿಕಾರಿಗಳು, ಮುಖೇಶ್ ಅಂಬಾನಿ ಹಾಗೂ ಸಾಫ್ಟ್ ವೇರ್ ದಿಗ್ಗಜ ಅಜೀಂ ಪ್ರೇಮ್ ಜಿ ಕೂಡ ತೆರಳಿದ್ದಾರೆ. ಈ ಭೇಟಿ ವೇಳೆ ಉಭಯ ದೇಶಗಳ ಪ್ರಧಾನಿಗಳು ಹಾಗೂ ಹಿರಿಯ ಅಧಿಕಾರಿಗಳು ಹಲವು ಮಹತ್ವದ ದ್ವಿಪಕ್ಷೀಯ ಮಾತುಕತೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ, ಭಾರತದಲ್ಲಿ ಬುಲೇಟ್ ಟ್ರೇನ್ ಯೋಜನೆಗೆ ಬಂಡವಾಳ ಹೂಡಿಕೆ ಪ್ರಸ್ತಾಪ, ಪರಮಾಣು ಶಕ್ತಿ ಒಪ್ಪಂದ, ರಕ್ಷಣಾ ಒಪ್ಪಂದದಲ್ಲಿ ಬಲವರ್ಧನೆ ಮೊದಲಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಜಪಾನ್ ನೊಂದಿಗೆ ಭಾರತ ಈ ಹಿಂದೆ ಮಾಡಿಕೊಂಡಿದ್ದ ಪರಮಾಣು ಒಪ್ಪಂದವನ್ನು ಪುನರ್ ಪರಿಶೀಲನೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಜಪಾನ್ ಗೆ ಇದ್ದ ಆತಂಕವನ್ನು ದೂರಮಾಡಿದ್ದಾರೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಜಪಾನ್ ಪ್ರವಾಸ ದ್ವಿಪಕ್ಷೀಯ ಮಾತುಕತೆಗೆ ಉತ್ತಮ ವೇದಿಕೆಯಾಗಲಿದೆ.