ನವದೆಹಲಿ : 'ರಾಷ್ಟ್ರ ವಿರೋಧಿ ಹೇಳಿಕೆ' ನೀಡಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪುತ್ರಿ, ಸಂಸದೆ ಕವಿತಾ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ವಾತಂತ್ರ್ಯಾನಂತರ ಹೈದ್ರಾಬಾದನ್ನು ಬಲವಂತವಾಗಿ ಭಾರತದೊಂದೊಗೆ ವಿಲೀನ ಮಾಡಲಾಗಿದೆ ಎಂದು ಚಂದ್ರಶೇಖರ ರಾವ್ ಪುತ್ರಿ ಕವಿತಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇಷ್ಟೇ ಅಲ್ಲದೇ ಜಮ್ಮು-ಕಾಶ್ಮೀರದ ಕೆಲವು ಪ್ರದೇಶ ಪಾಕಿಸ್ತಾನಕ್ಕೆ ಸೇರಿದೆ ಎಂದೂ ಹೇಳಿದ್ದರು. ಈ ಹೇಳಿಕೆ ವಿರುದ್ಧ ನವದೆಹಲಿ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಕವಿತಾ ವಿರುದ್ಧ ಸೆಕ್ಷನ್ 124A ಅಡಿ ರಾಷ್ಟ್ರಧ್ರೋಹ, 153B ಅಡಿ ರಾಷ್ಟ್ರದ ಭಾವೈಕ್ಯತೆಗೆ ಧಕ್ಕೆಯುಂಟುಮಾಡಿರುವುದು, 505ರ ಅಡಿ ಸಾರ್ವಜನಿಕರನ್ನು ತಪ್ಪು ದಾರಿಗೆಳೆದಿರುವ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದೇ ವೇಳೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಾಮಾನ್ಯ ರಾಜಧಾನಿಯಾಗಿರುವ ಹೈದ್ರಾಬಾದ್ ನ ಕಾನೂನು ಸುವ್ಯವಸ್ಥೆ ವಿಶೇಷ ಹೊಣೆಗಾರಿಕೆಯನ್ನು ರಾಜ್ಯಪಾಲ ನರಸಿಂಹನ್ ಅವರಿಗೆ ವಹಿಸಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆ ನೀಡಿರುವುದು ನರೇಂದ್ರ ಮೋದಿ ಸರ್ಕಾರ ಹಾಗೂ ತೆಲಂಗಾಣದ ಕೆ.ಚಂದ್ರಶೇಖರ ರಾವ್ ಸರ್ಕಾರದ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.