ಹೈದ್ರಾಬಾದ್ : ಪ್ರಮುಖ ಬೆಳವಣಿಗೆಯೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ(ಐ.ಎಸ್.ಐ.ಎಸ್)ಯನ್ನು ಸೇರಲು ತೆರಳುತ್ತಿದ್ದ 14 ಮಂದಿ ಯುವಕರನ್ನ ಹೈದ್ರಾಬಾದ್ ಪೊಲೀಸರು ತಡೆದಿದ್ದಾರೆ.
ಆಂಧ್ರಪ್ರದೇಶ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ 14 ಮಂದಿ ಯುವಕರನ್ನು ಹೈದ್ರಾಬಾದ್ ನ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ. ಹೈದ್ರಾಬಾದ್ ಮೂಲದ ಇಂಜಿನಿಯರ್ ಓರ್ವ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿ ಸಾವನ್ನಪ್ಪಿದ್ದ ಎಂಬ ಮಾಹಿತಿ ವರದಿಯಾಗುತ್ತಿದ್ದಂತೆಯೇ ಈ ಬೆಳವಣಿಗೆ ಕಂಡುಬಂದಿದೆ.
14 ಯುವಕರೂ ಸಹ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಇಸ್ಲಾಮಿಕ್ ಉಗ್ರ ಸಂಘಟನೆ ಸೇರಲು ಇರಾಕ್ ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಹೈದರಾಬಾದ್ ಮೂಲದ ಇಂಜಿನಿಯರ್ ಸಾವನ್ನಪ್ಪಿರುವ ಮಾಹಿತಿ ಪಡೆದ ಬೆನ್ನಲ್ಲೇ ಅಲ್ಲಿನ ಪೊಲೀಸರು ಮತ್ತಷ್ಟು ಯುವಕರು ಉಗ್ರ ಸಂಘಟನೆ ಸೇರುವುದನ್ನು ತಡೆಗಟ್ಟಲು ಆಪರೇಶಷನ್ ಚಕ್ರವ್ಯೂಹ ಹೆಸರಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈಗ 14 ಯುವಕರು ಬಂಧನಕ್ಕೊಳಗಾಗಿದ್ದು, ಅವರಿಂದ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ.
ಮುಂಬೈ ನಂತರ ಹೈದ್ರಾಬಾದ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಗುಂಪಿಗೆ ಗೆ ಸೇರಲು ಉತ್ಸುಕರಾಗಿರುವ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ.